ಪಾಕಿಸ್ತಾನ ಪಿಎಂ ಅಬ್ಬಾಸಿ (ಸಂಗ್ರಹ ಚಿತ್ರ)
ನ್ಯೂಯಾರ್ಕ್: ಪಾಕಿಸ್ತಾನ ಪ್ರಧಾನಿ ಶಾಹಿದ್ ಖಾನ್ ಅಬ್ಬಾಸಿ ಅವರು ಅಮೆರಿಕದ ನ್ಯೂಯಾರ್ತ್ ವಿಮಾನ ನಿಲ್ದಾಣದಲ್ಲಿ ಅಪಮಾನಕ್ಕೀಡಾದ ಘಟನೆ ವರದಿಯಾಗಿದೆ.
ಮೂಲಗಳ ಪ್ರಕಾರ ಅಮೆರಿಕಕ್ಕೆ ತೆರಳಿದ್ದ ಅಬ್ಬಾಸಿ ಅವರನ್ನು ನ್ಯೂಯಾರ್ಕ್ ನ ಜಾನ್ ಎಫ್ ಕೆನಡಿ ವಿಮಾನ ನಿಲ್ದಾಣದಲ್ಲಿ ಸಾಮಾನ್ಯ ಪ್ರಯಾಣಿಕರಂತೆ ನಡೆಸಿಕೊಂಡಿದ್ದು, ಅವರ ಬ್ಯಾಗ್ ಮತ್ತು ಅವರನ್ನು ತೀವ್ರ ಶೋಧ ನಡೆಸಲಾಗಿದೆ. ಅಮೆರಿಕ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಈ ಪ್ರಮಾದ ಎಸಗಿದ್ದು, ಇದರಿಂದ ಪಾಕಿಸ್ತಾನಕ್ಕೆ ಮತ್ತೊಮ್ಮೆ ಮುಖಭಂಗವಾಗಿದೆ.
ಈ ಸಂಬಂಧ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಡಿಯೋದಲ್ಲಿ ಶಾಹಿದ್ ಅಬ್ಬಾಸಿ ಅವರು ತಾವು ಧರಿಸಿದ್ದ ಕೋಟ್ ಅನ್ನು ತಮ್ಮ ತೋಳ ಮೇಲೆ ಹಾಕಿಕೊಂಡು ಒಂದು ಕೈಯಲ್ಲಿ ಸೂಟ್ಕೇಸ್ ಹಿಡಿದು ತಪಾಸಣೆ ನಡೆದ ಬಳಿಕ ಹೊರಬರುತ್ತಿದ್ದಾರೆ.
ಈ ಬಗ್ಗೆ ವರದಿ ಮಾಡಿರುವ ಪಾಕ್ ಮಾಧ್ಯಮಗಳು ಪ್ರಧಾನಿ ಅಬ್ಬಾಸಿ ಅವರನ್ನು ಅಮೆರಿಕ ಸರ್ಕಾರ ಅವಮಾನಿಸಿದ್ದು, ಅನುಚಿತವಾಗಿ ನಡೆದುಕೊಂಡಿದೆ ಎಂದು ವರದಿ ಬಿತ್ತರಿಸಿವೆ. ಅಮೆರಿಕ ಅಧ್ಯಕ್ಷ ಟ್ರಂಪ್ ಆಡಳಿತವು ಪಾಕಿಸ್ತಾನಿ ಸರ್ಕಾರದ ವ್ಯಕ್ತಿಗಳ ಮೇಲೆ ವೀಸಾ ನಿಷೇಧ ಮತ್ತು ಇತರ ನಿರ್ಬಂಧಗಳನ್ನು ವಿಧಿಸುತ್ತಿದೆ ಎಂದು ವರದಿ ಮಾಡಿವೆ.
ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾದ ನಂತರದ ದಿನಗಳಲ್ಲಿ ಪಾಕಿಸ್ತಾನ ಮತ್ತು ಅಮೆರಿಕ ನಡುವಿನ ಸಂಬಂಧ ಹದಗೆಟ್ಟಿದೆ. ಈ ಹಿಂದೆಯೇ ಪಾಕ್ ವಿರುದ್ಧ ಟ್ರಂಪ್ ಗುಡುಗಿದ್ದರು. ಪಾಕ್ ಉಗ್ರರಿಗೆ ನೆರವು ನೀಡುತ್ತಿದ್ದು, ಅವರಿಗೆ ಸರ್ಕಾರದ ನೆರವನ್ನು ನಿಲ್ಲಿಸುವುದಾಗಿ ಎಚ್ಚರಿಸಿದ್ದರು.
ಪಾಕ್ ಮಾಜಿ ಅಧ್ಯಕ್ಷ ಶರೀಫ್ ಅವರು ಭ್ರಷ್ಟಾಚಾರ ಪ್ರಕರಣ ಸಂಬಂಧ ಪ್ರಧಾನಿ ಹುದ್ದೆ ತೊರೆದ ಬಳಿಕ ಅವರ ಸಹೋದರ ಅಬ್ಬಾಸಿ ಅಧಿಕಾರಕ್ಕೇರಿದ್ದರು.