ನವದೆಹಲಿ: ಆಫ್ಘಾನಿಸ್ತಾನದ ಬಾಗ್ಲಾನ್ ಪ್ರಾಂತ್ಯದಲ್ಲಿ ಶಸ್ತ್ರಾಸ್ತ್ರಧಾರಿಯೊಬ್ಬ 7 ಮಂದಿ ಭಾರತೀಯರನ್ನು ಅಪಹರಿಸಿರುವ ವರದಿ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ಇಲಾಖೆ ವಕ್ತಾರರು, ನಾವು ಆಫ್ಘಾನಿಸ್ತಾನದ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದ್ದಾರೆ.
ಈ ಕುರಿತು ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ವಿಷಯ ತಿಳಿಸಿದ ಅವರು, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಆಫ್ಘಾನಿಸ್ತಾನದ ವಿದೇಶಾಂಗ ಸಚಿವರು ಮತ್ತು ಅಲ್ಲಿನ ಭದ್ರತಾ ಸಲಹೆಗಾರರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಎಲ್ಲಾ ರೀತಿಯ ನೆರವು ಕೋರಿರುವುದಾಗಿ ತಿಳಿಸಿದ್ದಾರೆ.
ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಭಾರತಕ್ಕೆ ಅಕ್ರಮವಾಗಿ ಹಣ ವರ್ಗಾಯಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಇದು ಪಾಕಿಸ್ತಾನದ ರಾಷ್ಟ್ರೀಯ ಲೆಕ್ಕಪತ್ರ ವಿಭಾಗ ಮಾಡಿರುವ ಆಪಾದನೆಯಾಗಿದೆ. ಇದಕ್ಕೆ ನಾವು ಪ್ರತಿಕ್ರಿಯಿಸಬೇಕಾದ ಅವಶ್ಯಕತೆಯಿಲ್ಲ ಎನಿಸುತ್ತದೆ ಎಂದು ರವೀಶ್ ಕುಮಾರ್ ಹೇಳಿದರು.