ಇಸ್ಲಾಮಾಬಾದ್ : ಯು.ಎಸ್. ರಾಜತಾಂತ್ರಿಕ ಅಧಿಕಾರಿಗಳಿಗೆ ಪಾಕಿಸ್ತಾನ ನಿರ್ಬಂಧಗಳನ್ನು ಪ್ರಕಟಿಸಿದೆ. ದೇಶದೊಳಗೆ ಇಂದಿನಿಂದ ಎಲ್ಲಾ ಅಮೆರಿಕಾದ ರಾಜತಾಂತ್ರಿಕ ಅಧಿಕಾರಿಗಳು ಮುಕ್ತವಾಗಿ ಸಂಚರಿಸದಂತೆ ಪಾಕಿಸ್ತಾನ ವಿದೇಶಾಂಗ ಇಲಾಖೆ ನಿರ್ಬಂಧಗಳನ್ನು ವಿಧಿಸಿದೆ.
ಪಾಕಿಸ್ತಾನ ನ್ಯೂಸ್ ಇಂಟರ್ ನ್ಯಾಷನಲ್ ನಲ್ಲಿ ನಿನ್ನೆ ಈ ಬಗ್ಗೆ ವರದಿಯಾಗಿದೆ. ಪಾಕಿಸ್ತಾನದ ರಾಯಬಾರಿ ಅಧಿಕಾರಿಗಳು ಅಮೆರಿಕಾ ಪ್ರವೇಶಿಸಲು ಐದು ದಿನಗಳ ಮುಂಚಿತವಾಗಿ ಅನುಮತಿ ಪಡೆಯಬೇಕೆಂದು ಟ್ರಂಪ್ ಆಡಳಿತ ನಿರ್ಧಾರ ಕೈಗೊಂಡಿತ್ತು.
UNSC ನಿರ್ಬಂಧಗಳ ಸಮಿತಿಯ ಪಟ್ಟಿಯಲ್ಲಿ ಜಮಾತ್-ಉಲ್-ಅಹರ್ ಮುಖಂಡ ಉಮರ್ ಖಲೀದ್ ಖುರಾಸಾನಿ ಅಕಾ ಅಬ್ದುಲ್ ವಾಲಿಯ ಹೆಸರನ್ನು ಹಾಕಲು ಇಸ್ಲಾಮಾಬಾದ್ ಮನವಿಯನ್ನು ಅಮೆರಿಕಾ ತಿರಸ್ಕರಿಸಿದ ನಂತರ ಟ್ರಂಪ್ ಆಡಳಿತ ಈ ನಿರ್ಧಾರ ತಾಳಿತ್ತು.
ನ್ಯಾಟೋ ಮತ್ತು ಅಮೆರಿಕಾ ಪಡೆಗಳ ನಿಗಾವಣೆಯಲ್ಲಿಯೇ ಉನ್ನತ ಉಗ್ರಗಾಮಿ ಮುಖಂಡರು ಅಫ್ಘಾನಿಸ್ತಾನದೊಳಗೆ ವಾಸಿಸುತ್ತಿದ್ದಾರೆ ಎಂದು ಪಾಕಿಸ್ತಾನ ಈ ಹಿಂದೆ ಅಮೆರಿಕಾದ ವಿರುದ್ಧ ಆರೋಪ ಮಾಡಿತ್ತು.
ಈ ಆರೋಪದಿಂದಾಗಿ ಟ್ರಂಪ್ ಆಡಳಿತ ಜಮತ್ ಉಲ್ ಅಹರ್ ಮುಖಂಡ ಉಮರ್ ಖಲೀದ್ ಖುರಾಸಾನಿ ಅಕಾ ಅಬ್ದುಲ್ ವಾಲಿಯ ಹೆಸರನ್ನು ಯುಎನ್ ಎಸ್ ಸಿ ನಿರ್ಬಂಧಗಳ ಪಟ್ಟಿಯಲ್ಲಿ ಸೇರಿಸಲು ತಿರಸ್ಕರಿಸಿತ್ತು.
ವಾಲಿ ಅಂತಾರಾಷ್ಟ್ರೀಯ ಭಯೋತ್ಪಾದಕನಾಗಿದ್ದು, ನೂರಾರು ಅಮಾಯಕ ಪಾಕಿಸ್ತಾನ ಜನರನ್ನು ಕೊಂದಿದ್ದಾನೆ. ಆತನನ್ನು ಯುಎನ್ ಎಸ್ ಸಿ ನಿರ್ಬಂಧಗಳ ಪಟ್ಟಿಯಲ್ಲಿ ಸೇರಿಸದಿರುವುದು ತುಂಬಾ ಅಸಮಾಧಾನ ಮೂಡಿಸಿದೆ ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆ ವಕ್ತಾರರು ತಿಳಿಸಿದ್ದಾರೆ.
ಭಯೋತ್ಪಾದನೆ ನಿರ್ಮೂಲನೆ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಸಂಸ್ಥೆಗಳು ದ್ವಿಮುಖ ನೀತಿ ಅನುಸರಿಸುತ್ತಿವೆ. ಪಾಕಿಸ್ತಾನವನ್ನು ಕಡೆಗಣಿಸುತ್ತಿವೆ ಎಂದು ಅವರು ಆರೋಪಿಸಿದ್ದರು.
ಇದರಿಂದಾಗಿ ಪಾಕಿಸ್ತಾನ ಕೂಡಾ ಮೇ 11 ರಿಂದ ಎಲ್ಲಾ ಅಮೆರಿಕಾ ರಾಯಬಾರುಗಳು ಹಾಗೂ ಅವರ ಚಲನವಲಗಳ ಮೇಲೆ ನಿರ್ಬಂಧವನ್ನು ವಿಧಿಸಲು ನಿರ್ಧರಿಸಿದೆ.
ಈ ವರ್ಷದ ಏಪ್ರಿಲ್ ತಿಂಗಳ ಮುಂಚಿನಿಂದಲೂ ವೀಸಾ ವಿಚಾರವಾಗಿ ಅಮೆರಿಕಾ ಹಾಗೂ ಪಾಕಿಸ್ತಾನದ ನಡುವೆ ವಿವಾದ ಭುಗಿಲೆದ್ದಿದೆ.
ಅಮೆರಿಕಾ ಕೂಡಾ ಪಾಕಿಸ್ತಾನ ರಾಯಬಾರಿಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದು, ಅಧಿಸೂಚನೆಯನ್ನು ಪಾಕಿಸ್ತಾನ ಸ್ವೀಕರಿಸಿದೆ. 25 ಮೈಲುಗಳ ವ್ಯಾಪ್ತಿಯ ಹೊರಗಿನ ಉದ್ದೇಶಿತ ಪ್ರಯಾಣದ ಕನಿಷ್ಠ ಐದು ದಿನಗಳ ಮುಂಚಿತವಾಗಿ ಅನುಮತಿಗಾಗಿ ಅವರು ಅರ್ಜಿ ಸಲ್ಲಿಸಬೇಕಾಗಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಮತ್ತೊಂದೆಡೆ, ಅಮೆರಿಕದ ಅಧಿಕಾರಿಗಳು, ತಮ್ಮ ಪಾಕಿಸ್ತಾನಿ ಸಹವರ್ತಿಗಳೊಂದಿಗೆ ಚರ್ಚಿಸಿ, ಇಸ್ಲಾಮಾಬಾದ್ ಈಗಾಗಲೇ ಅದರ ರಾಜತಾಂತ್ರಿಕರಿಗೆ ಇದೇ ನಿರ್ಬಂಧಗಳನ್ನು ವಿಧಿಸಿದೆ ಎಂದು ವಾದಿಸಿದ್ದಾರೆ, ಇವರು ಕರಾಚಿ ಮತ್ತು ಫೆಡರಲ್ ಆಡಳಿತದ ಬುಡಕಟ್ಟು ಪ್ರದೇಶಗಳು (FATA) ಗೆ ಹೋಗುವುದನ್ನು ನಿಷೇಧಿಸಲಾಗಿದೆ.
ಪಾಕಿಸ್ತಾನದ ಅಧಿಕಾರಿಗಳಿಗೆ ಅಮೆರಿಕವು ಅಲ್ಪಾವಧಿಯ ವೀಸಾಗಳನ್ನು ಪರಿಚಯಿಸಿದೆ ಎಂಬುದು ಉಭಯ ದೇಶಗಳ ನಡುವಿನ ಭಿನ್ನಾಭಿಪ್ರಾಯಕ್ಕೂ ಕಾರಣವಾಗಿದೆ.