ನೇಪಾಳ ಪ್ರವಾಸದಲ್ಲಿ ಪ್ರಧಾನಿ ಮೋದಿ; ಜನಕಪುರ-ಅಯೋಧ್ಯಾ ಬಸ್ ಸೇವೆಗೆ ಚಾಲನೆ
ಕಠ್ಮಂಡು: 2 ದಿನಗಳ ಕಾಲ ನೇಪಾಳ ಪ್ರವಾಸ ಕೈಗೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಜಾನಕಿ ದೇವಸ್ಥಾನಕ್ಕೆ ಭೇಟಿ ನೀಡಿ ಜನಕಪುರ-ಅಯೋಧ್ಯೆ ನಡುವಿನ ಬಸ್ ಸೇವೆಯನ್ನು ಉದ್ಘಾಟಿಸಿದ್ದಾರೆ.
ಜನಕಪುರ-ಅಯೋಧ್ಯೆ ನಡುವಿನ ಬಸ್ ಸೇವೆಯನ್ನು ಉದ್ಘಾಟನೆ ಮಾಡಿದ ಬಳಿಕ ಮಾತನಾಡಿರುವ ಮೋದಿಯವರು, ಜನಕಪುರ ಹಾಗೂ ಅಯೋಧ್ಯೆ ನಡುವೆ ಸಂಪರ್ಕ ಏರ್ಪಟ್ಟಿದೆ. ಇದೊಂದು ಐತಿಹಾಸಿಕ ಕ್ಷಣ ಎಂದು ಹೇಳಿದ್ದಾರೆ.
ರಾಮಾಯಣ ಸರ್ಕ್ಯೂಟ್ ನಲ್ಲಿ ಭಾರತ ಸರ್ಕಾರ ದೇಶದ 15 ಸ್ಥಳಗಳನ್ನು ಗುರ್ತಿಸಲಾಗಿದೆ. ಇದರಲ್ಲಿ ಉತ್ತರಪ್ರದೇಶದ ಅಯೋಧ್ಯೆ, ನಂದಿ ಗ್ರಾಮ್, ಶೃಂಗವೇರ್ ಪುರ ಮತ್ತು ಚಿತ್ರಕೂಟ, ಬಿಹಾರದ ಸೀತಾಮಡಿ, ಬಕ್ಸರ್ ಮತ್ತು ದರ್ಭಂಗಾ, ಮಧ್ಯಪ್ರದೇಶದ ಚಿತ್ರಕೂಟ, ಒಡಿಸಾದ ಮಹೇಂದ್ರ ಗಿರಿ, ಛತ್ತೀಸ್ಗಢದ ಜಗದಾಲ್ ಪುರ, ಮಹಾರಾಷ್ಟ್ರದ ನಾಶಿಕ್ ಮತ್ತು ನಾಗಪುರ, ತೆಲಂಗಾಣದ ಭದ್ರಾಚಲಮ್, ಹಾಗೂ ತಮಿಳುನಾಡಿನ ರಾಮೇಶ್ವರಂ, ಕರ್ನಾಟಕದ ಹಂಪಿ ರಾಮಾಯಣ ಸರ್ಕ್ಯೂಟ್ ನಲ್ಲಿವೆ ಎಂದು ಹೇಳಿದ್ದಾರೆ.
ಮಾತಾ ಜಾನಕಿಯ ಜನ್ಮ ಸ್ಥಳಕ್ಕೆ ಭೇಟಿ ನೀಡಲು ನನಗೆ ಸಿಕ್ಕಿರುವ ಅವಕಾಶದಿಂದ ನಾನು ಧನ್ಯನಾಗಿದ್ದೇನೆ. ಭಾರತ ಮತ್ತು ನೇಪಾಳ ಉಭಯ ರಾಷ್ಟ್ರಗಳ ನಡುವಿನ ರಾಮಾಯಣ ವರ್ತುಲವನ್ನು ನಿರ್ಮಿಸುವಲ್ಲಿ ಜೊತೆಗೂಡಿ ಶ್ರಮಿಸಬೇಕಿದೆ. ಜನಕಪುರ ಭೇಟಿ ವೇಳೆ ನನ್ನೊಂದಿಗೆ ಸಾಥ್ ನೀಡಿದ ನೇಪಾಳ ಪ್ರಧಾನಮಂತ್ರಿಗಳಿಗೆ ಈ ಮೂಲಕ ಧನ್ಯವಾದಗಳನ್ನು ಹೇಳುತ್ತೇನೆ.
ನೇಪಾಳದ ನನಗೆ ಸ್ವಾಗತ ಕೋರಿದ ರೀತಿಯ ಭಾರತೀಯ ಜನರ ಮೇಲೆ ನೇಪಾಳಕ್ಕಿರುವ ಪ್ರೀತಿಯನ್ನು ತೋರಿಸುತ್ತದೆ ಎಂದು ತಿಳಿಸಿದ್ದಾರೆ.