ಭಾರತ-ಚೀನಾ ನಡುವೆ ಹೊಸ ಸಂಘರ್ಷ ಮೂಡಿಸಲಿದೆಯೇ ಅರುಣಾಚಲ ಪ್ರದೇಶದಲ್ಲಿ ಪ್ರಾರಂಭವಾಗಲಿರೋ ಚಿನ್ನದ ಗಣಿ?
ಬೀಜಿಂಗ್: ಅರುಣಾಚಲ ಪ್ರದೇಶದಲ್ಲಿರುವ ತನ್ನ ಗಡಿಯ ಭಾಗದಲ್ಲಿ ಚೀನಾ ಬೃಹತ್ ಪ್ರಮಾಣದಲ್ಲಿ ಚಿನ್ನದ ಗಣಿಗಾರಿಕೆ ಮಾಡಲು ಪ್ರಾರಂಭಿಸಿದೆ. ಈ ಪ್ರದೇಶದಲ್ಲಿ ಸುಮಾರು 60 ಬಿಲಿಯನ್ ಡಾಲರ್ ನಷ್ಟು ಮೌಲ್ಯದ ಚಿನ್ನ, ಬೆಳ್ಳಿ ಸೇರಿದಂತೆ ಹಲವು ಬೆಲೆಬಾಳುವ ಖನಿಜಗಳ ಖಜಾನೆ ಪತ್ತೆಯಾಗಿದೆ.
ಚೀನಾದ ಹಿಡಿತದಲ್ಲಿರುವ ಟಿಬೆಟ್ ಪ್ರಾಂತ್ಯದಲ್ಲಿರುವ ಲುಂಜ್ಜ್ ಕೌಂಟಿ ಅರುಣಾಚಲ ಪ್ರದೇಶದಲ್ಲಿರುವ ಚೀನಾದ ಗಡಿ ಪ್ರದೇಶದಲ್ಲಿ ಚಿನ್ನದ ಗಣಿಗಾರಿಕೆಯನ್ನು ನಡೆಸುತ್ತಿದೆ. ಚೀನಾ ಲಗಾತ್ತಿನಿಂದಲೂ ಅರುಣಾಚಲಪ್ರದೇಶವನ್ನು ದಕ್ಷಿಣ ಟಿಬೆಟ್ ನ ಒಂದು ಭಾಗವೆಂದೇ ವಾದ ಮಾಡುತ್ತಿದ್ದು, ಅರುಣಾಚಲಪ್ರದೇಶವನ್ನು ಅತಿಕ್ರಮಿಸುವ ಉದ್ದೇಶದಿಂದಲೇ ಚೀನಾ ಅರುಣಾಚಲ ಪ್ರದೇಶದಲ್ಲಿ ತನ್ನ ಭಾಗದಲ್ಲಿರುವ ಗಡಿಯಲ್ಲಿ ಚಿನ್ನದ ಗಣಿಗಾರಿಕೆ ನಡೆಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅರುಣಾಚಲ ಪ್ರದೇಶದ ಪ್ರಾಂತ್ಯದಲ್ಲಿರುವ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಚೀನಾ ಹಕ್ಕು ಪ್ರತಿಪಾದನೆ ಮಾಡುತ್ತಿರುವುದು ಈಗ ಭಾರತ-ಚೀನಾ ನಡುವೆ ಹೊಸ ಸಂಘರ್ಷಕ್ಕೆ ಕಾರಣವಾಗಲಿದೆಯೇ ಎಂಬ ಪ್ರಶ್ನೆಯನ್ನು ಮೂಡಿಸಿದೆ.
ಚೀನಾ- ಭಾರತದ ನಡುವಿನ ದ್ವಿಪಕ್ಷೀಯ ಸಂಬಂಧ ಸುಧಾರಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸೀ ಜಿನ್ಪಿಂಗ್ ಅವರ ಭೇಟಿ ನಡೆದ ಬೆನ್ನಲ್ಲೇ ಅರುಣಾಚಲ ಪ್ರದೇಶದ ತನ್ನ ಗಡಿ ಪ್ರದೇಶದಲ್ಲಿ ಚೀನಾ ಚಿನ್ನದ ಗಣಿಗಾರಿಕೆ ನಡೆಸಲು ಪ್ರಾರಂಭಿಸಿದೆ.