ಇಸ್ಲಾಮಾಬಾದ್: ರಾವಲ್ಪಿಂಡಿ ನಗರದಲ್ಲಿರುವ ಕೃಷ್ಣನ ದೇವಸ್ತಾನದ ವಿಸ್ತರಣೆಗೆ ಪಾಕಿಸ್ತಾನದ ಪಂಜಾಬ್ ಸರ್ಕಾರ 20 ಮಿಲಿಯನ್ ಅನುದಾನ ಬಿಡುಗಡೆ ಮಾಡಿದೆ.
ದೇವಸ್ತಾನದಲ್ಲಿ ನಡೆಯುವ ಉತ್ಸವಗಳು ಮತ್ತು ಧಾರ್ಮಿಕ ಆರಚಣೆ ಸಮಯದಲ್ಲಿ ಹಿಂದೂ ಭಕ್ತರಿಗೆ ಸೌಕರ್ಯವನ್ನು ಹೆಚ್ಚಿಸು ಹಿನ್ನೆಲೆಯಲ್ಲಿ ಪಂಜಾಬ್ ಸರ್ಕಾರ ಈ ನಿರ್ಣಯಕ್ಕೆ ಮುಂದಾಗಿದೆ.
ಇನ್ನು ರಾವಲ್ಪಿಂಡಿ ಮತ್ತು ಇಸ್ಲಾಮಾಬಾದ್ ಅವಳಿ ನಗರಗಳಲ್ಲಿ ಇದೊಂದು ಧಾರ್ಮಿಕ ಕ್ಷೇತ್ರವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುವುದರಿಂದ ಅವರಿಗೆ ಹೆಚ್ಚಿನ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ 20 ಮಿಲಿಯನ್ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಇಟಿಪಿಬಿ ಉಪ ಆಡಳಿತಾಧಿಕಾರಿ ಮೊಹಮ್ಮದ್ ಆಸೀಫ್ ಹೇಳಿದ್ದಾರೆ.
ಪ್ರಾಂತೀಯ ಅಸೆಂಬ್ಲಿಯ ಸದಸ್ಯರು ಮನವಿ ಮೇರೆಗೆ ಆಸೀಫ್ ಅವರು ಈಗಾಗಲೇ ದೇವಸ್ತಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದೇವಸ್ತಾನ ವಿಸ್ತರಣೆ ಹಿನ್ನೆಲೆಯಲ್ಲಿ ದೇವಸ್ತಾನದಲ್ಲಿದ್ದ ವಿಗ್ರಹಗಳನ್ನು ಕೊಠಡಿಯೊಂದರಲ್ಲಿ ಇರಿಸಲಾಗಿದೆ. ಒಂದೊಮ್ಮೆ ನಿರ್ಮಾಣ ಕಾರ್ಯ ಮುಕ್ತಾಯಗೊಂಡ ನಂತರ ಹೆಚ್ಚಿನ ಭಕ್ತರಿಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದರು.
ಸ್ಥಳೀಯ ಹಿಂದೂಗಳ ಬೇಡಿಕೆ ಅನುಸರಿಸಿ ಪಂಜಾಬ್ ಸರ್ಕಾರ ಹಣವನ್ನು ಬಿಡುಗಡೆ ಮಾಡಿದೆ ಎಂದು ಜಗ್ ಮೋಹನ್ ಅರೋರಾ ಹೇಳಿದ್ದಾರೆ. ಪ್ರಸ್ತುತ ದೇವಸ್ತಾನ ತುಂಬಾ ಚಿಕ್ಕದಾಗಿದೆ. ಹೀಗಾಗಿ ದೇವಸ್ತಾನದ ವಿಸ್ತರಣೆಗೆ ಮನವಿ ಮಾಡಲಾಗಿತ್ತು ಎಂದರು.