ಕೊಲಂಬೊ: ಶ್ರೀಲಂಕಾದಲ್ಲಿ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳು ದಿನಕ್ಕೊಂದು ತಿರುವು ಪಡೆಯುತ್ತಿದ್ದು,ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ ಅವರು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಪಕ್ಷದೊಂದಿಗಿನ 50 ವರ್ಷಗಳ ಒಡನಾಟವನ್ನು ಕಡಿದುಕೊಂಡಿದ್ದಾರೆ.
ಮಹಿಂದಾ ರಾಜಪಕ್ಸ ಸಿರಿಸೇನಾ ಅಧ್ಯಕ್ಷರಾಗಿರುವ ಶ್ರೀಲಂಕಾ ಫ್ರೀಡಂ ಪಾರ್ಟಿ (ಎಸ್ಎಲ್ಎಫ್ಪಿ) ಪಕ್ಷವನ್ನು ತೊರೆದು ಹೊಸದಾಗಿ ಸ್ಥಾಪಿಸಲ್ಪಟ್ಟಿರುವ ಶ್ರೀಲಂಕಾ ಪೀಪಲ್ಸ್ ಪಾರ್ಟಿ (ಎಸ್ಎಲ್ಪಿಪಿ) ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಮಹಿಂದಾ ರಾಜಪಕ್ಸ ಅವರು 2006ರಿಂದ 2015ರವರೆಗೆ ಪಕ್ಷದ ಅಧ್ಯಕ್ಷರಾಗಿಯೂ ದುಡಿದಿದ್ದರು. ಆದರೆ ಅ.26ರಂದು ನಡೆದ ರಾಜಕೀಯ ಬೆಳವಣಿಗೆಯಲ್ಲಿ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ರಾನಿಲ್ ವಿಕ್ರಮಸಿಂಘೆ ಅವರನ್ನು ಪ್ರಧಾನಿ ಹುದ್ದೆಯಿಂದ ಪದಚ್ಯುತಿಗೊಳಿಸಿ ಮಹಿಂದಾ ರಾಜಪಕ್ಸ ಅವರನ್ನು ಪ್ರಧಾನಿಯಾಗಿ ನಿಯೋಜಿಸಿದ್ದರು.
ಆದರೆ ಮಹಿಂದಾ ರಾಜಪಕ್ಸ ಅವರು ಸಂಸತ್ತಿನಲ್ಲಿ ಬಹುಮತ ಸಾಬೀತು ಪಡಿಸುವುದು ಅಸಾಧ್ಯ ಎಂಬುದು ಖಚಿತವಾಗುತ್ತಿದ್ದ ಅಧ್ಯಕ್ಷ ಸಿರಿಸೇನಾ ಸಂಸತ್ ಅನ್ನು ವಿಸರ್ಜಿಸಿದ್ದರು. ನಂತರ ಜನವರಿ 5 ರಂದು ಚುನಾವಣೆ ಘೋಷಣೆಯಾಗಿತ್ತು.