ಲಂಡನ್: ತುಂಬು ಗರ್ಭಿಣಿ ಮಹಿಳೆ ಮೇಲೆ ಬಿಲ್ಲು-ಬಾಣದಿಂದ ದಾಳಿ ಮಾಡಲಾಗಿದ್ದು, ದಾಳಿಯಲ್ಲಿ ಮಹಿಳೆ ಸಾವನ್ನಪ್ಪಿದ್ದು, ಹೊಟ್ಟೆಯಲ್ಲಿದ್ದ ಮಗು ಅಚ್ಚರಿ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಲಂಡನ್ ನಲ್ಲಿ ನಡೆದಿದೆ.
ಪೂರ್ವ ಲಂಡನ್ ನ ಇಲ್ಫೋರ್ಡ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ವಾಸಿಸುತ್ತಿದ್ದ ಶೆಡ್ ನಲ್ಲಿ ಅಡಗಿದ್ದ ದುಷ್ಕರ್ಮಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನುಗ್ಗಿ ಆಕೆಯ ಮೇಲೆ ಬಿಲ್ಲಿನಿಂದ ದಾಳಿ ಮಾಡಿದ್ದಾನೆ. ಆತ ಬಿಟ್ಟ ಬಾಣ ನೇರವಾಗಿ ಆಕೆಯ ಹೊಟ್ಟೆಯನ್ನು ಸೀಳಿದೆ. ರಕ್ತಸ್ರಾವದಲ್ಲಿದ್ದ ಮಹಿಳೆಯನ್ನು ಕಂಡ ಆಕೆಯ 2ನೇ ಪತಿ ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದರಾದರೂ ಆಕೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ.
ಇನ್ನು ಅಚ್ಚರಿ ವಿಚಾರವೆಂದರೆ ಆಕೆಯ ಹೊಟ್ಟೆಯಲ್ಲಿದ್ದ ಮಗುವನ್ನು ವೈದ್ಯರು ಸಿಸೇರಿಯನ್ (ಶಸ್ತ್ರ ಚಿಕಿತ್ಸೆ) ಮೂಲಕ ಹೊರ ತೆಗೆದಿದ್ದು, ಮಗು ಆರೋಗ್ಯವಾಗಿದೆ ಎಂದು ಹೇಳಿದ್ದಾರೆ. ದುಷ್ಕರ್ಮಿ ಬಿಟ್ಟ ಬಾಣ ಆಕೆಯ ಗರ್ಭಕ್ಕೆ ಯಾವುದೇ ರೀತಿಯ ಹಾನಿ ಮಾಡಿಲ್ಲ ಎಂದು ವೈದ್ಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಸಾವಿಗೀಡಾದ ಮಹಿಳೆಯನ್ನು 35 ವರ್ಷದ ದೇವಿ ಉನ್ಮಾಥಲೇಗಡೂ ಎಂದು ಗುರುತಿಸಲಾಗಿದ್ದು, ಈಕೆ ರಾಮನ್ಡೊಗೆ ಉನ್ಮಾಥಲೇಗಡೂ ಎಂಬುವವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಮೂವರು ಮಕ್ಕಳಿದ್ದು, ಬಳಿಕ ಈಕೆ ಆತನಿಗೆ ವಿಚ್ಛೇದನ ನೀಡಿದ್ದರು. ಬಳಿಕ ವರ್ಷಗಳ ಹಿಂದೆ ಈಕೆ ಇಮ್ತಿಯಾಜ್ ಮೊಹಮದ್ ಎಂಬುವವರನ್ನು ವಿವಾಹವಾಗಿ ಬಳಿಕ ಇಸ್ಲಾಮ್ ಧರ್ಮಕ್ಕೆ ಮತಾಂತರವಾಗಿ ತಮ್ಮ ಹೆಸರನ್ನು ಸನಾ ಮೊಹಮದ್ ಎಂದು ಹೆಸರು ಬದಲಿಸಿಕೊಂಡಿದ್ದರು. ಇದೀಗ ಈಕೆಯನ್ನು ಆಕೆಯ ಮಾಜಿ ಪತಿ ಕೊಲೆಗೈದಿದ್ದಾನೆ.
ಪ್ರಸ್ತುತ ಆರೋಪಿಯನ್ನು ಲಂಡನ್ ಪೊಲೀಸರು ಬಂಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics