ನ್ಯೂ ಜೆರ್ಸಿ: ಅಮೆರಿಕ ಯುವಕನ ಗುಂಡೇಟಿಗೆ 61 ವರ್ಷದ ತೆಲಂಗಾಣ ವ್ಯಕ್ತಿ ಸಾವು!
ನ್ಯೂ ಜೆರ್ಸಿ: ಅಮೆರಿಕದಲ್ಲಿ ಭಾರತೀಯರ ಮೇಲಿನ ದಾಳಿ ಮುಂದುವರೆದಿದ್ದು, ಅಮೆರಿಕ ಯುವಕನ ಗುಂಡಿನ ದಾಳಿಗೆ 61 ವರ್ಷದ ತೆಲಂಗಾಣ ಮೂಲದ ವ್ಯಕ್ತಿ ಮೃತಪಟ್ಟಿದ್ದಾರೆ.
ನ್ಯೂ ಜೆರ್ಸಿಯಲ್ಲಿ ಈ ಘಟನೆ ನಡೆದಿದ್ದು ಸುನಿಲ್ ಎದ್ಲಾ (61) ಸಾವನ್ನಪ್ಪಿರುವ ದುರ್ದೈವಿ. ಸುನಿಲ್ ತಮ್ಮ ಮನೆ ಮುಂಭಾಗದಲ್ಲಿರಬೇಕಾದರೆ ಅಮೆರಿಕ ಯುವಕನೋರ್ವ ಗುಂಡಿನ ದಾಳಿ ನಡೆಸಿದ್ದಾನೆ. ಮೃತ ಸುನಿಲ್, ಹಾಸ್ಪೆಟಲ್ ಇಂಡಸ್ಟ್ರಿಯೊಂದರಲ್ಲಿ ನೈಟ್ ಆಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ರಾತ್ರಿ ಪಾಳಿಯ ಕೆಲಸಕ್ಕೆ ತೆರಳು ಮನೆಯಿಂದ ಹೊರಡುತ್ತಿರಬೇಕಾದರೆ ಕಾರಿನಲ್ಲಿ ಬಂದಿದ್ದ ಯುವಕನೋರ್ವ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದ. ಶೀಘ್ರವೇ ಆರೋಪಿಯ ಗುರುತು ಪತ್ತೆ ಹಚ್ಚಿದ್ದ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 1987 ರಲ್ಲಿ ಅಮೆರಿಕಾಗೆ ವಲಸೆ ಹೋಗಿದ್ದ ಸುನಿಲ್ ಈ ತಿಂಗಳಾಂತ್ಯಕ್ಕೆ ತನ್ನ ತಾಯಿಯ 95 ನೇ ಜನ್ಮದಿನಾಚರಣೆಗಾಗಿ ಭಾರತಕ್ಕೆ ಬರಬೇಕಿತ್ತು.