ವಿದೇಶ

ಚೀನಾ ದೂತವಾಸ ಕಚೇರಿಯಿಂದ ಉಗ್ರರನ್ನು ಹಿಮ್ಮೆಟ್ಟಿಸಿದ ಕರಾಚಿ ಮಹಿಳಾ ಪೊಲೀಸ್ ಅಧಿಕಾರಿ

Srinivas Rao BV
ಕರಾಚಿ: ಕರಾಚಿಯ ಮಹಿಳಾ ಪೊಲೀಸ್ ಅಧಿಕಾರಯೊಬ್ಬರು ಚೀನಾ ದೂತವಾಸ ಸಿಬ್ಬಂದಿಗಳನ್ನು ಭಯೋತ್ಪಾದಕರಿಂದ ರಕ್ಷಿಸಿದ್ದಾರೆ. 
ಸುಹೈ ಅಜೀಜ್ ತಾಲ್ಪುರ್  ಭಯೋತ್ಪಾದಕರನ್ನು ಚೀನಾ ದೂತವಾಸ ಕಚೇರಿಯಿಂದ ಹಿಮ್ಮೆಟ್ಟಿಸಿದ್ದ ದಿಟ್ಟ ಅಧಿಕಾರಿಯಾಗಿದ್ದು, ಹಿಂದೊಮ್ಮೆ ಖಾಸಗಿ ಶಾಲೆಗೆ ಸೆರಿದ್ದಕ್ಕಾಗಿ ಕುಟುಂಬ ಸಂಬಂಧಿಕರು ಹಾಗೂ ಗ್ರಾಮಸ್ಥರಿಂದ ಪರಿತ್ಯಕ್ತರಾಗಿದ್ದರು. ಆದರೆ ಅದೇ  ಮಹಿಳಾ ಅಧಿಕಾರಿ ನೇತೃತ್ವದಲ್ಲಿ ಇಂದು ಪಾಕಿಸ್ತಾನ ಪೊಲೀಸರು ಬಲೂಚ್ ಲಿಬರೇಷನ್ ಆರ್ಮಿ ಸದಸ್ಯರ ದಾಳಿಯನ್ನು ವಿಫಲಗೊಳಿಸಿದ್ದಾರೆ. 
9 ಹ್ಯಾಂಡ್ ಗ್ರೆನೇಡ್, ದಾಳಿ ಬಂದೂಕುಗಳು, ಸ್ಫೋಟಕಗಳನ್ನು ಹೊಂದಿದ್ದ ಭಯೋತ್ಪಾದಕರು ಚೀನಾ ದೂತವಾಸ ಕಚೇರಿಗೆ ನುಗ್ಗಲು ಯತ್ನಿಸಿದರು. ಆದರೆ ಶಸ್ತ್ರಧಾರಿಗಳು ಚೀನಾ ದೂತವಾಸ ಕಚೇರಿಯನ್ನು ಪ್ರವೇಶಿಸದಂತೆ ತಡೆಯುವಲ್ಲಿ ಸುಹೈ ಅಜೀಜ್ ತಾಲ್ಪುರ್ ತಂಡ ಯಶಸ್ವಿಯಾಗಿದೆ. 
ಚೀನಾ ದೂತವಾಸ ಕಚೇರಿಗೆ ನುಗ್ಗಿ ಅಲ್ಲಿರುವವರನ್ನು ಒತ್ತೆಯಾಳುಗಳಾಗಿ ಇಟ್ಟುಕೊಳ್ಳುವ ಉದ್ದೇಶದಿಂದ ಮಾತ್ರೆಗಳು, ಆಹಾರ ಪದಾರ್ಥಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಹೊಂದಿದ್ದರು. ಆದರೆ ಗೇಟ್ ಬಳಿ ಆಗಮಿಸುತ್ತಿದ್ದಂತೆಯೇ ಪೊಲೀಸ್ ಅಧಿಕಾರಿಗಳು ಪ್ರತಿ ದಾಳಿ ನಡೆಸಿದ್ದು, ಘಟನೆಯಲ್ಲಿ ಇಬ್ಬರು ಭಯೋತ್ಪಾದಕರು ಹಗಊ ಇಬ್ಬರು ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದಾರೆ.
ಸಿಂಧ್ ಪ್ರಾಂತ್ಯದ ಭಾಯ್ ಖಾನ್ ಎಂಬ ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದ ಸುಹೈ ಅವರನ್ನು ಪೋಷಕರು ಖಾಸಗಿ ಶಾಲೆಗೆ ಸೇರಿಸಿದ್ದರು. ಆದರೆ ಇದನ್ನು ಮೂದಲಿಸಿದ್ದ ಸಂಬಂಧಿಕರು ಹಾಗೂ ಮುಹಮ್ಮದ್ ಖಾನ್ ಜಿಲ್ಲೆಯ ತಲ್ಪುರ್ ಗ್ರಾಮಸ್ಥರು ಆಕೆ ಹಾಗೂ ಆಕೆಯ ಕುಟುಂಬ ಸದಸ್ಯರಿಂದ ಅಂತರ ಕಾಯ್ದುಕೊಂಡಿದ್ದರು. ಆದರೆ  ಎಲ್ಲಾ ಸವಾಲುಗಳನ್ನು ಎದುರಿಸಿದ್ದ ಸುಹೈ 2013 ರಲ್ಲಿ ಪ್ರತಿಷ್ಠಿತ ಸೆಂಟ್ರಲ್ ಸುಪೀರಿಯರ್ ಸರ್ವೀಸಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಪೊಲೀಸ್ ಇಲಾಖೆ ಸೇರಿದ್ದರು. 
SCROLL FOR NEXT