ನ್ಯೂಯಾರ್ಕ್: ಸಾಗರೋತ್ತರದಲ್ಲಿ ತನ್ನ ಹಿತಾಸಕ್ತಿಗಳಿಗೆ ಅಪಾಯವನ್ನುಂಟು ಮಾಡುವ ಪ್ರತ್ಯೇಕತಾವಾದಿ ಚಳವಳಿಗಳ ಸಂಘಟನೆಗಳಲ್ಲಿ ಭಾರತದ ಸಿಖ್ ಉಗ್ರಗಾಮಿ ಸಂಘಟನೆಯಾದ ಬಬ್ಬರ್ ಖಲ್ಸಾವನ್ನು ಅಮೆರಿಕಾ ಹೆಸರಿಸಿದೆ. ದೇಶದ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಗಳನ್ನು ಗುರಿಯಾಗಿಟ್ಟುಕೊಂಡು ಈ ಚಳವಳಿಗಳು ಬಾಂಬು ಇಡುವುದು, ಹತ್ಯೆಗಳನ್ನು ಮಾಡುತ್ತವೆ, ಇದರಿಂದ ತಮ್ಮ ದೇಶಕ್ಕೆ ಧಕ್ಕೆಯಿದೆ ಎಂದು ಅಮೆರಿಕಾ ಹೇಳಿದೆ.
ಭಾರತದಲ್ಲಿ ಮತ್ತು ಬೇರೆ ರಾಷ್ಟ್ರಗಳಲ್ಲಿ ತನ್ನದೇ ಆದ ಸ್ವತಂತ್ರ ರಾಜ್ಯವನ್ನು ಸ್ಥಾಪಿಸಲು ಬಬ್ಬರ್ ಖಲ್ಸಾ ಹಲವು ಭಯೋತ್ಪಾದಕ ದಾಳಿಗಳನ್ನು ನಡೆಸಿದ್ದು, ಮುಗ್ಧ ನಾಗರಿಕರನ್ನು ಬಲಿ ತೆಗೆದುಕೊಂಡಿದೆ ಎಂದು ಅಮೆರಿಕಾದ ಶ್ವೇತಭವನ ಮೊನ್ನೆ ಹೊರಡಿಸಿರುವ ಭಯೋತ್ಪಾದನೆ ನಿಗ್ರಹಕ್ಕೆ ಹೊಸ ರಾಷ್ಟ್ರೀಯ ಕಾರ್ಯತಂತ್ರ ತಿಳಿಸಿದೆ.
ಬಬ್ಬರ್ ಖಲ್ಸಾ ಒಂದು ಅಂತಾರಾಷ್ಟ್ರೀಯ ಉಗ್ರಗಾಮಿ ಸಂಘಟನೆಯಾಗಿದ್ದು ಅಮೆರಿಕಾ, ಕೆನಡಾ, ಭಾರತ ಸೇರಿದಂತೆ ಹಲವು ದೇಶಗಳು ಈಗಾಗಲೇ ಇದನ್ನು ನಿಷೇಧಿಸಿವೆ. ಇತ್ತೀಚಿನ ತಿಂಗಳಲ್ಲಿ ಭಾರತ ಅಮೆರಿಕಾ ಸರ್ಕಾರದೊಂದಿಗೆ ನಡೆಸಿದ ಮಾತುಕತೆ ವೇಳೆ ಪ್ರತ್ಯೇಕತಾವಾದಿ ಸಿಖ್ ರ ವಿಷಯ ಪ್ರಸ್ತಾಪಿಸಿದ್ದು ಈ ಉಗ್ರಗಾಮಿ ಸಂಘಟನೆ ತನ್ನ ಕುಕೃತ್ಯವನ್ನು ವಿಶ್ವಮಟ್ಟದಲ್ಲಿ ವಿಸ್ತರಿಸಿಕೊಳ್ಳಲು ಅಮೆರಿಕಾವನ್ನು ಮೂಲ ನೆಲೆಯಾಗಿ ಬಳಸಿಕೊಳ್ಳುತ್ತಿದೆ ಎಂದು ಹೇಳಿತ್ತು.
ಸಾಗರೋತ್ತರದಲ್ಲಿ ವ್ಯಾಪಕವಾದ ಕ್ರಾಂತಿಕಾರಿ, ರಾಷ್ಟ್ರೀಯತಾವಾದಿ ಮತ್ತು ಪ್ರತ್ಯೇಕತಾವಾದಿ ಚಳವಳಿಗಳು ನಡೆಯುತ್ತಿದ್ದು ಹಿಂಸೆಯನ್ನು ಮಾರ್ಗವಾಗಿ ಬಳಸಿಕೊಳ್ಳುವ ಮೂಲಕ ಸಮಾಜಗಳನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವುದು ಅಮೆರಿಕಾದ ನಾಗರಿಕರನ್ನು ಅಪಾಯಕ್ಕೊಡ್ಡುತ್ತವೆ ಎಂದು ಶ್ವೇತಭವನ ಇತ್ತೀಚೆಗೆ ಹೊರಡಿಸಿದ ಕಾರ್ಯತಂತ್ರ ಪತ್ರದಲ್ಲಿ ಹೇಳಿದೆ.