ಹಾಂಗ್ ಕಾಂಗ್: ಭಾರತದಲ್ಲಿ ಅಪಾರ ಪ್ರಮಾಣದ ಬ್ಯಾಂಕ್ ವಂಚನೆ ನಡೆಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿಗೆ ಸೇರಿದ್ದ ಮಳಿಗೆಯಲ್ಲಿ ನಕಲಿ ವಜ್ರಗಳ ಮಾರಾಟ ನಡೆದಿರುವುದು ಇದೀಗ ಬೆಳಕಿಗೆ ಬಂದಿದೆ. ಕೆನಡಾ ಮೂಲದ ವ್ಯಕ್ತಿಯೊಬ್ಬ ನೀರವ್ ಮೋದಿ ಮಾಲಿಕತ್ವದ ಮಳಿಗೆಯಲ್ಲಿ ವಜ್ರ ಖರೀದಿ ಮಾಡಿ ತನ್ನ ಗೆಳತಿಗೆ ನೀಡಿದ್ದು ಗೆಳತಿ ಅದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದು ನಕಲಿ ವಜ್ರ ಎನ್ನುವುದು ತಿಳಿದಿದೆ. ಇದರಿಂದ ಮನನೊಂದು ಯುವತಿ ತನ್ನ ಪ್ರಿಯಕರನಿಂದ ದೂರವಾಗಿದ್ದಾಳೆ. ಇದೀಗ ಆ ವ್ಯಕ್ತಿ ಗೆಳತಿಯ ಅಗಲಿಕೆಯಿಂದ ಮಾನಸಿಕ ಖಿನ್ನತೆಗೆ ತುತ್ತಾಗಿದ್ದಾನೆ.
ಭಾರತದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ನಕಲಿ ಸಾಲ ಮಂಜುರು ಪತ್ರ ಸಲ್ಲಿಸಿ ಸಾವಿರಾರು ಕೋಟಿ ನಷ್ಟ ಉಂಟಾಗುವಂತೆ ಮಾಡಿದ ನೀರವ್ ಮೋದಿ ಹಾಂಗ್ ಕಾಂಗ್ ನ ತನ್ನ ಮಳಿಗೆಯಲ್ಲಿದ್ದ ಎರಡು ನಕಲಿ ವಜ್ರದ ರಿಂಗ್ ಅನ್ನು ಎರಡು ಲಕ್ಷ ಅಮೆರಿಕನ್ ಡಾಲರ್ (ಸುಮಾರು 1.4 ಕೋಟಿರು.) ಗೆ ಕೆನಡಾ ವ್ಯಕ್ತಿಗೆ ಮಾರಾಟ ಮಾಡಿದ್ದನು.
ನೀರವ್ ಮೋದಿಯಿಂದ ಮೋಸಹೋದ ಕೆನಡಾ ವ್ಯಕ್ತಿಯನ್ನು ಪಾಲ್ ಅಲ್ಫೊನ್ಸ್ಎಂದು ಗುರುತಿಸಲಾಗಿದೆ. ಈತನಿಗೆ ನೀರವ್ ಮೋದಿ ವಂಚನೆಯ ಕುರಿತು ಯಾವ ಮಾಹಿತಿ ಇರಲಿಲ್ಲ. ಈತ ತನ್ನ ಗೆಳತಿಗಾಗಿ ಈ ರಿಂಗ್ ಗಳನ್ನು ಖರೀದಿಸಿದ್ದ. ಆದರೆ ರಿಂಗ್ ನಲ್ಲಿರುವ ವಜ್ರಗಳು ನಕಲಿ ಎಂದು ತಿಳಿಯುತ್ತಿದ್ದಂತೆ ಆ ಗೆಳತಿ ಕೆನಡಾ ವ್ಯಕ್ತಿಯೊಂದಿಗೆ ತನ್ನ ಸಂಬಂಧ ಕಡಿದುಕೊಂಡಿದ್ದಾಳೆ ಎಂದು ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ಅಲ್ಫೋನ್ಸೊ ಮತ್ತು ನೀರವ್ ಮೊದಲ ಬಾರಿಗೆ 2012 ರಲ್ಲಿ ಭೇಟಿಯಾದರು ಮತ್ತು ಕೆಲವು ತಿಂಗಳುಗಳ ನಂತರ ಮತ್ತೆ ಒಟ್ಟು ಸೇರಿದ್ದಾರೆ.ಅವರು "ಉತ್ತಮ" ಸಂಬಂಧ ಹೊಂದಿದ್ದರು. ನೀರವ್ ಹಾಗೂ ಅಲ್ಫೋನ್ಸೊ ಪರಸ್ಪರ ಒಡಹುಟ್ಟಿದವರಂತೆ ಬಂಧಿಸಲ್ಪಟ್ಟಿದ್ದರು.
ಇದಾಗಿ ಈ ವರ್ಷ ಏಪ್ರಿಲ್ ನಲ್ಲಿ ಅಲ್ಫೋನ್ಸೊ ನೀರವ್ ಗೆ ತಾನು ವಿವಾಹವಾಗಬೇಕೆನ್ನುವ ಗೆಳತಿಯೊಡನೆ ನಿಶ್ಚಿತಾರ್ಥ ಮಾಡಿಕೊಳ್ಳುವ ಸಲುವಾಗಿ ಎರಡು ವಿಶೇಷ ಡೈಮಂಡ್ ರಿಂಗ್ ಬೇಕೆಂದು ಮೇಲ್ ಕಳಿಸಿದನು. ಇದರಂತೆ ನೀರವ್ ಅವನಿಗೆ 3.2 ಕ್ಯಾರೆಟ್ ತೂಕದ ವಜ್ರದ ಉಂಗುರಗಳನ್ನು ಮಾರಾಟ ಮಾಡಿದ್ದನು.
ಆದರೆ ಇದೇ ಆಗಸ್ಟ್ ನಲ್ಲಿ ಯುವ ಜೋಡಿ ನಿಶ್ಚಿತಾರ್ಥಕ್ಕೆ ಸಿದ್ದವಾಗಿದ್ದಾಗ ನೀರವ್ ಕಳುಹಿಸಿದ ಎರಡೂ ವಜ್ರದ ಉಂಗುರಗಳು ನಕಲಿ ಎನ್ನುವುದು ತಿಳಿದಿದೆ. ಆದರೆ ಮೊದಲು ಅಲ್ಫೋನ್ಸೊ ತನ್ನ ಗೆಳತಿಯ ಮಾತನ್ನೇ ನಂಬಿರಲಿಲ್ಲ "'ಅದು ಅಸಾಧ್ಯ. ಆ ಉಂಗುರಗಳಿಗೆ ಣಾನು ಎರಡು ಲಕ್ಷ ಅಮೆರಿಕನ್ ಡಾಲರ್ ತೆತ್ತಿದ್ದೇನೆ.ಇದು ನಕಲಿಯಾಗಲು ಸಾಧ್ಯವಿಲ್ಲ ಎಂದು ವಾದಿಸಿದ್ದನು ಆದರೆ ಯಾವಾಗ ನೀರವ್ ಮೋದಿ ಒಡೆತನದ ಸಂಸ್ಥೆಗಳ ದಿವಾಳಿ ಕಥೆಗಳು ಕೇಳಿದವೋ, ಆತನು ಬ್ಯಾಂಕ್ ಗಳಿಗೆ ವಂಚಿಸಿ ಪರಾರಿಯಾಗಿರುವ ಸುದ್ದಿ ಹರಡಿತೋ ಆಗ 'ಅಲ್ಫೋನ್ಸೊಗೆ ನಿಜವಾಗಿಯೂ ಆಘಾತವಾಗಿತ್ತು.
ಸಧ್ಯ ಅಲ್ಫೋನ್ಸೊ ನಿಶ್ಚಿತಾರ್ಥ ಮುರಿದುಬಿದ್ದಿದೆ, ಆತ ಖಿನ್ನತೆಗೆ ಒಳಗಾಗಿದ್ದಾನೆ.ಅಲ್ಲದೆ ಅವರು ಕ್ಯಾಲಿಫೋರ್ನಿಯಾದಲ್ಲಿ ನೀರವ್ ವಿರುದ್ಧ ಪ್ರಕರಣ ದಾಖಲಿಸಿದ್ದು ಒಟ್ಟು 4.2 ಮಿಲಿಯನ್ ಡಾಲರ್ ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ.