ಯುನೈಟೆಡ್ ನೇಷನ್ಸ್: ವಿಶ್ವಸಂಸ್ಥೆಯ ಸಾಮಾನ್ಯ ಸಭೆ (ಜನರಲ್ ಅಸೆಂಬ್ಲಿ) ಪ್ರಥಮ ಮಹಿಳಾ ಅಧ್ಯಕ್ಷರಾಗಿದ್ದ ವಿಜಯಲಕ್ಷ್ಮಿ ಪಂಡಿತ್ ನನಗೆ ಸ್ಪೂರ್ತಿ.ಅವರ ಚಿತ್ರವನ್ನು ನನ್ನ ಕಛೇರಿಯಲ್ಲಿ ಇಡಲು ಯೋಜಿಸಿದ್ದೇನೆ ಎಂದು ಸಾಮಾನ್ಯ ಸಭೆಯ ಹಾಲಿ ಅಧ್ಯಕ್ಷೆಯಾದ ಮರಿಯಾ ಫರ್ನಾಂಡ ಎಸ್ಪಿನೋಸ ಹೇಳಿದ್ದಾರೆ.
ಮರಿಯಾ ಅವರನ್ನು ಭೇಟಿಯಾಗಿದ್ದ ಭಾರತೀಯ ಸಂಸದ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ ನ ಪ್ರೇಮದಾಸ್ ರೈ ಈ ವಿಚಾರ ತಿಳಿಸಿದ್ದಾರೆ.
ವಿಶ್ವಸಂಸ್ಥೆಯಲ್ಲಿ ವಿಜಯಲಕ್ಷ್ಮಿ ಅವರ ಸಾಧನೆಯನ್ನು ಕಂಡು, ಅವರಿಂದ ಸ್ಪೂರ್ತಿಗೊಂಡು ನಾನು ಈ ಸ್ಥಾನಕ್ಕೇರಿದ್ದೇನೆ ಎನ್ನುವುದಾಗಿ ಮರಿಯಾ ಭಾರತೀಯ ಸಂಸದರ ನಿಯೋಗಕ್ಕೆ ಹೇಳಿದ್ದಾರೆ.
ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಾಲ್ಕನೇ ಮಹಿಳೆ ಮರಿಯಾ ಫರ್ನಾಂಡಾ ಅವರಾಗಿದ್ದು ಇದುವರೆಗೆ 69 ಪುರುಷರು ಈ ಹುದ್ದೆಯನ್ನು ಅಲಂಕರಿಸಿದ್ದರು.
ಭಾರತದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಸಹೋದರಿಯಾದ ವಿಜಯಲಕ್ಷ್ಮಿ ಪಂಡಿತ್ 1953 ರಲ್ಲಿ ಸಾಮಾನ್ಯ ಸಭೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಈಕ್ವೆಡಾರ್ ಮೂಲದವರಾದ ಮರಿಯಾ ಫರ್ನಾಂಡ ಭಾರತೀಯ ಪ್ರಜಾಪ್ರಭುತ್ವವನ್ನು ಗೌರವಿಸುತ್ತಾರೆ.ಮತ್ತು ಭಾರತ ಒಂದು ಸ್ಪೂರ್ತಿಯನ್ನು ತುಂಬುವ ರಾಷ್ಟ್ರವೆಂದು ಆಕೆ ತಮ್ಮ ಕಛೇರಿಯಲ್ಲಿರಿಸಿಕೊಂಡಿದ್ದ ಮಹಾತ್ಮ ಗಾಂಧಿ ಅವರ ಪುಸ್ತಕವನ್ನು ಸೂಚಿಸಿ ಹೇಳಿದ್ದಾರೆ.