ವಾಷಿಂಗ್ಟನ್: ಭಾರತೀಯ ಐಟಿ ಉದ್ಯೋಗಸ್ಥರಿಗೆ ಕಂಟಕವಾಗಿದ್ದ ಅಮೆರಿಕ ಸರ್ಕಾರದ ಎಚ್ ಬಿ ವೀಸಾ ವಿರುದ್ಧ ಐಟಿ ಕಂಪನಿಗಳೇ ತಿರುಗಿಬಿದ್ದಿದ್ದು, ಎಚ್ 1ಬಿ ವೀಸಾ ಕುರಿತ ನಿಯಮಾವಳಿ ಬದಲಾವಣೆಯನ್ನು ವಿರೋಧಿಸಿ ಇದೀಗ ಕಾನೂನು ಕ್ರಮಕ್ಕೆ ಮುಂದಾಗಿವೆ.
ಅಮೆರಿಕದಲ್ಲಿರುವ ಸುಮಾರು 1 ಸಾವಿರ ಐಟಿ ಕಂಪನಿಗಳ ಇಂಡೋ-ಅಮೆರಿಕ ಮೂಲದ ಐಟಿ ಉದ್ಯೋಗಿಗಳ ಒಕ್ಕೂಟ ಅಮೆರಿಕ ವಲಸೆ ಸಚಿವಾಲಯದ ವಿರುದ್ಧ ಇದೀಗ ಕಾನೂನು ಕ್ರಮಕ್ಕೆ ಮುಂದಾಗಿದ್ದು, ಎಚ್ 1 ಬಿ ವೀಸಾ ಅವಧಿಯನ್ನು ಕಡಿತಗೊಳಿಸುವ ನಿರ್ಧಾವನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿವೆ. ಈ ಹಿಂದೆ ಎಚ್ 1ಬಿ ವೀಸಾ ನಿಯಾಮಾವಳಿಯಲ್ಲಿ ಕಠಿಣ ಬದಲಾವಣೆ ತಂದಿದ್ದ ಅಮೆರಿಕ ಸರ್ಕಾರ 3 ವರ್ಷಗಳ ವೀಸಾಗಳ ಅವಧಿಯನ್ನು ಕಡಿತಗೊಳಿಸಿತ್ತು.
ವಲಸೆ ಸಚಿವಾಲಯದ ಈ ಕ್ರಮದಿಂದಾಗಿ ಐಟಿ ಕಂಪನಿಗಳು ಭಾರಿ ಇಕ್ಕಟ್ಟಿಗೆ ಸಿಲುಕಿದ್ದವು. ಇದರಿಂದ ವಿದೇಶಿ ತಜ್ಞ ಉದ್ಯೋಗಸ್ಥರಿಗೆ ಅನಾನುಕೂಲವಾಗುತ್ತಿದೆ ಎಂದು ದೂರಿದ್ದವು. ಆದರೂ ಸರ್ಕಾರ ಐಟಿ ಕಂಪನಿಗಳ ಆಗ್ರಹಕ್ಕೆ ಮಣಿಯದ ಕಾರಣ ಇದೀಗ ಉದ್ಯೋಗಿಗಳ ಒಕ್ಕೂಟ ಅಮೆರಿಕ ವಲಸೆ ಸಚಿವಾಲಯದ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿವೆ.
ಅಮೆರಿಕದಲ್ಲಿರುವ ಬಹುತೇಕ ಐಟಿ ಕಂಪನಿಗಳು ಪ್ರತೀ ವರ್ಷ ವಿವಿಧ ದೇಶಗಳಿಂದ ಸಾವಿರಾರು ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತವೆ. ಈ ಪೈಕಿ ಭಾರತ ಮತ್ತು ಚೀನಾದಿಂದ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಈ ಪೈಕಿ ಕನಿಷ್ಠ 3 ರಿಂದ 6 ವರ್ಷಗಳ ಅವಧಿಗೆ ನೇಮಕವಾಗುತ್ತಿದ್ದ ಉದ್ಯೋಗಿಗಳ ಸಂಖ್ಯೆಯೇ ಹೆಚ್ಚು. ಆದರೆ ಬದಲಾದ ಎಚ್ 1ಬಿ ವೀಸಾ ನಿಯಮದ ಅನ್ವಯ ಭಾವಿ ಉದ್ಯೋಗಸ್ಥರಿಗೆ ಮಾತ್ರವಲ್ಲದೇ ಹಾಲಿ ಐಟಿ ಉದ್ಯೋಗಿಗಳೂ ತೊಂದರೆಗೆ ಸಿಲುಕುವಂತಾಗಿದ್ದು, ಯಾವುದೇ ಕ್ಷಣದಲ್ಲೂ ಅವರ ವೀಸಾ ಅವಧಿ ಮುಕ್ತಾಯವಾಗಿ ಅವರು ದೇಶದಿಂದ ಹೊರಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದರಿಂದ ಸಣ್ಣ ಐಟಿ ಕಂಪನಿಗಳ ಆಸ್ಥಿತ್ವಕ್ಕೇ ಧಕ್ಕೆ ಎದುರಾಗಲಿದೆ ಎಂದು ಐಟಿ ಕಂಪನಿಗಳು ತಮ್ಮ ದೂರಿನಲ್ಲಿ ಐಟಿ ಕಂಪನಿಗಳ ಒಕ್ಕೂಟದ ಅಧ್ಯಕ್ಷ ಗೋಪಿ ಕಂಡೂರಿ ಆಲವತ್ತುಕೊಂಡಿದ್ದಾರೆ.