ಇಸ್ಲಾಮಾಬಾದ್: 2008ರ ಮುಂಬೈ ದಾಳಿಯ ಪ್ರಮುಖ ರುವಾರಿಯಾಗಿರುವ ಉಗ್ರ ಹಫೀಜ್ ಸಯೀದ್ ನೇತೃತ್ವದ ಜಮಾತ್-ಉದ್-ದವಾ (ಜೆಯುಡಿ) ಮತ್ತು ಫಲಾ-ಐ-ಇನ್ಸಾನಿಯಾತ್ ಫೌಂಡೇಶನ್ (ಎಫ್ಐಎಫ್) ಮೇಲಿನ ನಿಷೇಧ ತೆವುಗೊಂಡಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ಶುಕ್ರವಾರ ವರದಿ ಮಾಡಿವೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿ ಜೆಯುಡಿ ಹಾಗೂ ಎಫ್ಐಎಫ್ ಸಂಘಟನೆಗಳನ್ನು ನಿಷೇಧಿತ ಉಗ್ರ ಸಂಘಟನೆಗಳ ಪಟ್ಟಿಗೆ ಸೇರ್ಪಡೆಗೊಳಿಸಿತ್ತು. ಇದರ ಆಧಾರದ ಮೇರೆಗೆ ಕಳೆದ ಫೆಬ್ರವರಿ ತಿಂಗಳಿನಲ್ಲಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಮಮ್ನೂನ್ ಹುಸೇನೆ ಅವರು ಭಯೋತ್ಪಾದನಾ ವಿರೋಧಿ ಕಾಯ್ದೆ, 1997ಕ್ಕೆ ತಿದ್ದುಪಡಿ ತಂದು ಈ ಎರಡೂ ಸಂಘಟನೆಗಳನ್ನು ನಿಷೇದಿತ ಸಂಘಟನೆಗಳ ಪಟ್ಟಿಗೆ ಸೇರ್ಪಡೆಗೊಳಿಸರು ಸುಗ್ರೀವಾಜ್ಞೆ ಹೊರಡಿಸಿದ್ದರು.
ಇದರ ವಿರುದ್ಧ ಸಯೀದ್ ನ್ಯಾಯಾಲಯದ ಮೆಟ್ಟಿಲೇರಿದ್ದ. ಈ ಅರ್ಜಿ ಕುರಿತಂತೆ ಗುರುವಾರ ವಿಚಾರಣೆ ನಡೆದಿದ್ದು, ವಿಚಾರಣೆ ವೇಳೆ ಸಯೀದ್ ಪರ ವಕೀಲರು ಸುಗ್ರೀವಾಜ್ಞೆ ಅವಧಿ ಮುಕ್ತಾಯಗೊಂಡಿದ್ದು, ನಿಷೇಧವನ್ನು ಮುಂದುವರೆಸುವಂತಿಲ್ಲ ಎಂದು ವಾದ ಮಂಡಿಸಿದ್ದಾರೆ. ಅಲ್ಲದೆ, 2002ರಲ್ಲಿ ಜಮಾದ್ ಉದ್ ದವಾ ಸ್ಥಾಪನೆಗೊಂಡಿದ್ದು, ನಂತರ ನಿಷೇಧಿತ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯೊಂದಿಗನ ಸಂಬಂಧವನ್ನು ಕಡಿದುಕೊಂಡಿತ್ತು. ಆದರೂ, ಭಾರತ ಜೆಯುಡಿಯನ್ನು ಉಗ್ರ ಸಂಘಟನೆಯೆಂದು ಬಿಂಬಿಸುತ್ತಿದೆ. ಭಾರತದ ಒತ್ತಡದ ಪರಿಣಾವಾಗಿ 2009ರಿಂದ 2017ರವರೆಗೂ ಸಯೀದ್ ಅವರನ್ನು ಬಂಧನದಲ್ಲಿರಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಈ ವೇಳೆ ಪ್ರತಿಕ್ರಿಯೆ ನೀಡಿರುವ ನ್ಯಾಯಾಲಯ, ಸುಗ್ರೀವಾಜ್ಞೆಯ ಅವಧಿ ಪೂರ್ಣಗೊಂಡಿರುವ ಹಿನ್ನಲೆಯಲ್ಲಿ ಅರ್ಜಿಯನ್ನು ವಿಚಾರಣೆ ನಡೆಸಲು ಸಾಧ್ಯವಿಲ್ಲ. ಸರ್ಕಾರ ಸುಗ್ರೀವಾಜ್ಞೆಯನ್ನು ಮತ್ತೆ ಜಾರಿ ಮಾಡಿದ್ದೇ ಆದರೆ, ಅರ್ಜಿದಾರರು ಮತ್ತೆ ಸುಗ್ರೀವಾಜ್ಞೆ ಪ್ರಶ್ನಿಸಿ ಅರ್ಜಿ ಸಲ್ಲಿಸಿದರೆ ವಿಚಾರಣೆ ನಡೆಸಬಹುದು ಎಂದು ತಿಳಿಸಿದ್ದಾರೆ.
ಈ ನಡುವೆ ಪಾಕಿಸ್ತಾನದ ರಾಷ್ಟ್ರೀಯ ಭಯೋತ್ಪಾದನೆ ನಿಗ್ರಹ ಪ್ರಾಧಿಕಾರದ ವೆಬ್ ಸೈಟ್ ನಿಂದ ನಿಷೇಧಕ್ಕೊಳಗಾಗಿರುವ 66 ಉಗ್ರ ಸಂಘಟನೆಗಳ ಪರಿಷ್ಕೃತ ಪಟ್ಟಿಯನ್ನು ಸೆ.5 ರಂದು ಪ್ರಕಟಿಸಲಾಗಿದ್ದು, ಈ ಪಟ್ಟಿಯಲ್ಲಿ ಜೆಯುಡಿ ಹಾಗೂ ಎಫ್ಐಎಫ್ ಸಂಘಟನೆಗಳ ಹೆಸರುಗಳಿಲ್ಲ ಎಂದು ವರದಿಗಳಿಂದ ತಿಳಿದುಬಂದಿದೆ.