ವಿದೇಶ

ರೊಹಿಂಗ್ಯಾ ಬಿಕ್ಕಟ್ಟನ್ನು ಇನ್ನಷ್ಟು ಉತ್ತಮವಾಗಿ ನಿರ್ವಹಿಸಬಹುದಿತ್ತು: ಆಂಗ್ ಸಾನ್ ಸೂಕಿ

Srinivasamurthy VN
ನೇಪಿಡಾ: ರೊಹಿಂಗ್ಯಾ ಬಿಕ್ಕಟ್ಟನ್ನು ಇನ್ನಷ್ಟು ಉತ್ತಮವಾಗಿ ನಿರ್ವಹಿಸಬಹುದಿತ್ತು ಎಂದು ಮಯನ್ಮಾರ್ ನಾಯಕಿ ಮತ್ತು ಖ್ಯಾತ ನೊಬೆಲ್ ಪ್ರಶಸ್ತಿ ವಿಜೇತೆ ಆಂಗ್ ಸಾನ್ ಸೂಕಿ ಹೇಳಿದ್ದಾರೆ.
ರೊಹಿಂಗ್ಯಾ ಬಿಕ್ಕಟ್ಟಿನ ಕುರಿತು ಇದೇ ಮೊದಲ ಬಾರಿಗೆ ಮಾತನಾಡಿರುವ ಆಂಗ್ ಸಾನ್ ಸೂಕಿ, ರೊಹಿಂಗ್ಯಾ ಬಿಕ್ಕಟ್ಟನ್ನು ಇನ್ನಷ್ಟು ಉತ್ತಮವಾಗಿ ನಿರ್ವಹಿಸಬಹುದಿತ್ತು. ಈ ಬಗ್ಗೆ ಸಾಕಷ್ಚು ಮಾರ್ಗಗಳು ಕೂಡ ಇದ್ದವು. ಆದರೆ ಯೋಚನೆ ಮಾಡುವಷ್ಟು ಸಮಯಾವಕಾಶವಿರಲಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಮಯನ್ಮಾರ್ ಸೈನಿಕರ ವಿರುದ್ಧ ಕೇಳಿ ಬಂದಿರುವ ಹಿಂಸಾಚಾರ ಮತ್ತು ಸಾಮೂಹಿಕ ಲೈಂಗಿಕ ಕಿರುಕುಳ ದಂತಹ ಗಂಭೀರ ಆರೋಪಗಳನ್ನು ಸೂಕಿ ತಳ್ಳಿ ಹಾಕಿದ್ದು, ನಾವು ಪಾರದರ್ಶಕರವಾಗಿ ಕಾರ್ಯ ನಿರ್ವಹಿಸಿದ್ದೇವೆ. ಅಂತೆಯೇ ನಾವು ಎಲ್ಲ ವರ್ಗದ ಜನರಿಗೂ ನಿಷ್ಪಕ್ಷಪಾತ ನ್ಯಾಯ ಒದಗಿಸಬೇಕಿತ್ತು. ಹೀಗಾಗಿ ಕೆಲ ಕಠಿಣ ನಿರ್ಣಯಗಳು ಅನಿವಾರ್ಯವಾಗಿತ್ತು ಎಂದು ಹೇಳುವ ಮೂಲಕ ಸೂಕಿ ಮಯನ್ಮಾರ್ ಸೈನಿಕರ ಬೆನ್ನಿಗೆ ನಿಂತಿದ್ದಾರೆ.
ಕಾನೂನು ಮತ್ತು ದೇಶದ ನೀತಿ ನಿಯಮಾವಳಿಗಳು ಎಲ್ಲರಿಗೂ ಒಂದೇ.. ನಾನು ಇಂತವರಿಗೆ ಮಾತ್ರ ನಿಯಮ ಎಂದು ಆಯ್ಕೆ ಮಾಡಲು ಸಾಧ್ಯವಿಲ್ಲ. ದೇಶದ ಹಿತದೃಷ್ಟಿಯಿಂದ ಕಠಿಣ ಕ್ರಮ ಅನಿವಾರ್ಯವಾಗಿತ್ತು ಎಂದು ಸೂಕಿ ಹೇಳಿದ್ದಾರೆ.
ಇನ್ನು ರೊಹಿಂಗ್ಯಾ ಹಿಂಸಾಚಾರದ ಹಿನ್ನಲೆಯಲ್ಲಿ ಮಯನ್ಮಾರ್ ನ ರಾಖೀನ್ ರಾಜ್ಯದಲ್ಲಿ ಪರಿಸ್ಥಿತಿ ಅವಲೋಕನಕ್ಕ ನಿಯೋಜನೆಗೊಂಡಿದ್ದ ವಿಶ್ವಸಂಸ್ಥೆಯ ಸಮಿತಿಯೊಂದು ಎರಡು ವಾರಗಳ ಹಿಂದೆ ತನ್ನ ವರದಿ ನೀಡಿದ್ದು, ವರದಿಯಲ್ಲಿ ರೊಹಿಂಗ್ಯಾ ಮುಸ್ಲಿಮರ ಹೊರದೂಡಲು ಮಯನ್ಮಾರ್ ಸೈನಿಕರು ಹಿಂಸಾಚಾರ ನಡೆಸಿದ್ದರು. ಈ ವೇಳೆ ರೊಹಿಂಗ್ಯಾ ಮಹಿಳೆಯರ ಮೇಲಿನ ಸಾಮೂಹಿಕ ಅತ್ಯಾಚಾರ ದಂತಹ ಪ್ರಕರಣಗಳೂ ಹಿಂಸಾಚಾರ ಭಾಗವಾಗಿತ್ತು ಎಂದು ವರದಿ ನೀಡಲಾಗಿತ್ತು. ಈ ವರದಿ ಬಹಿರಂಗ ಬೆನ್ನಲ್ಲೇ ಮಯನ್ಮಾರ್ ಸೈನಿಕರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
SCROLL FOR NEXT