ವಿದೇಶ

ರೊಹಿಂಗ್ಯಾ ಬಿಕ್ಕಟ್ಟಿನ ವೇಳೆ ಹಿಂಸಾಚಾರ, ವಿಶ್ವಸಂಸ್ಥೆ ತನಿಖೆಗೆ ಮಯನ್ಮಾರ್ ಒಪ್ಪಿಗೆ

Srinivasamurthy VN
ನೇಪಿಡಾ: ರೊಹಿಂಗ್ಯಾ ಬಿಕ್ಕಟ್ಟಿನ ವೇಳೆ ಸಂಭವಿಸಿದ್ದ ಭಾರಿ ಪ್ರಮಾಣದ ಹಿಂಸಾಚಾರ ಮತ್ತು ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದಂತೆ ಮಯನ್ಮಾರ್ ಸೇನೆ ವಿರುದ್ಧ ಕೇಳಿ ಬಂದಿರುವ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ತನಿಖೆಗೆ ಮಯನ್ಮಾರ್ ಸರ್ಕಾರ ಒಪ್ಪಿಗೆ ನೀಡಿದೆ.
ಮಯನ್ಮಾರ್ ನ ರಾಖೈನ್ ರಾಜ್ಯದ ಸಾವಿರಾರು ಅಕ್ರಮ ರೊಹಿಂಗ್ಯಾ ವಲಸಿಗರನ್ನು ಹೊರಹಾಕಲು ಕೈಗೊಂಡಿದ್ದ ಕಾರ್ಯಾಚರಣೆ ವೇಳೆ ನಡೆದಿದ್ದ ಸೇನಾ ಅಕ್ರಮಗಳಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಸಮಿತಿಯೊಂದು ಕಳೆದೆರಡು ವಾರಗಳ ಹಿಂದೆ ತನ್ನ ವರದಿ ನೀಡಿತ್ತು. ಈ ವರದಿಯಾಧಾರದ ಮೇಲೆ ವಿಶ್ವಸಂಸ್ಥೆ ಸ್ವತಂತ್ರ್ಯ ತನಿಖೆಗೆ ಮುಂದಾಗಿದ್ದು, ಈ ತನಿಖೆ ಸಂಬಂಧ ಮಯನ್ಮಾರ್ ಸರ್ಕಾರವನ್ನು ಸಂಪರ್ಕ ಮಾಡಿತ್ತು. ಇದೀಗ ಮಯನ್ಮಾರ್ ಸರ್ಕಾರ ವಿಶ್ವಸಂಸ್ಥೆ ತನಿಖೆಗೆ ಒಪ್ಪಿಗೆ ನೀಡಿದೆ ಎನ್ನಲಾಗಿದೆ.
ಇನ್ನು ಕಳೆದ ವರ್ಷ ನಡೆದ ರೊಹಿಂಗ್ಯಾ ಕಾರ್ಯಾಚರಣೆ ವೇಳೆ ಮಯನ್ಮಾರ್ ಸೈನಿಕರು ಹಲವು ಅಕ್ರಮಗಳಲ್ಲಿ ಪಾಲ್ಗೊಂಡಿದ್ದರು, ಅನಾವಶ್ಯಕ ಹಿಂಸಾಚಾರಕ್ಕೆ ದಾರಿ ಮಾಡಿಕೊಟ್ಟಿದ್ದರು. ಅಲ್ಲದೆ ರಖೈನ್ ನಗರದಲ್ಲಿನ ರೊಹಿಂಗ್ಯನ್ನರ ಶಿಬಿರಗಳಿಗೆ ನುಗ್ಗಿ ಅಲ್ಲಿನ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಹಲವರನ್ನು ಕೊಂದು ಹಾಕಿದ್ದರು ಎಂದು ಗಂಭೀರ ಆರೋಪಗಳು ಕೇಳಿಬಂದಿತ್ತು. ಈ ಸಂಬಂಧ ಕಳೆದೆರಡು ವಾರಗಳ ಹಿಂದಷ್ಟೇ ವಿಶ್ವಸಂಸ್ಥೆಯಿಂದ ನೇಮಿಸ್ಲಪಟ್ಟಿದ್ದ ವಿಶೇಷ ತಂಡ ತನ್ನ ವರದಿ ನೀಡಿತ್ತು. ಈ ವರದಿಯನ್ನಾಧರಿಸಿ ವಿಶ್ವಸಂಸ್ಥೆ ಇದೀಗ ತನಿಖೆಗೆ ಮುಂದಾಗಿದೆ.
ಇದಕ್ಕೆ ಮಯನ್ಮಾರ್ ಸರ್ಕಾರ ಕೂಡ ಒಪ್ಪಿಗೆ ನೀಡಿದ್ದು, ತನಿಖೆ ನಿಮಿತ್ತ ಮಯನ್ಮಾರ್ ಗೆ ಆಗಮಿಸುವ ತನಿಖಾಧಿಕಾರಿಗಳ ಸುರಕ್ಷತೆ ಕುರಿತು ಮಯನ್ಮಾರ್ ಸರ್ಕಾರ ಮತ್ತು ವಿಶ್ವಸಂಸ್ಥೆ ಒಪ್ಪಂದ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.
SCROLL FOR NEXT