ವಿದೇಶ

ಭಾರತದ ಎ-ಸ್ಯಾಟ್​ ಪರೀಕ್ಷೆ ಬೆಂಬಲಿಸಿದ ಅಮೆರಿಕ

Lingaraj Badiger
ವಾಷಿಂಗ್ಟನ್​: ಅಂತರಿಕ್ಷದಲ್ಲಿನ ಉಪಗ್ರಹ ನಾಶಪಡಿಸಲು ಭಾರತ ನಡೆಸಿದ ಎ-ಸ್ಯಾಟ್ ಕ್ಷಿಪಣಿ ಪರೀಕ್ಷೆಯನ್ನು ಅಮೆರಿಕ ಸಮರ್ಥಿಸಿಕೊಂಡಿದ್ದು, ಭಾರತಕ್ಕೆ ಬಾಹ್ಯಾಕಾಶ ಬಗ್ಗೆ ತೀವ್ರ ಕಳವಳ ಇದೆ ಎಂದು ಶುಕ್ರವಾರ ಹೇಳಿದೆ.
‘ಭಾರತ ಎ-ಸ್ಯಾಟ್​ ಕ್ಷಿಪಣಿ ವ್ಯವಸ್ಥೆಯನ್ನು ಏಕೆ ಪರೀಕ್ಷಿಸಿತು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆದರೆ ಭಾರತ ತನ್ನ ಮೇಲೆ ಬಾಹ್ಯಾಕಾಶದಿಂದ ಒದಗಬಹುದಾದ ಅಪಾಯಗಳನ್ನು ತಡೆಯುವ ನಿಟ್ಟಿನಲ್ಲಿ ಈ ಪರೀಕ್ಷೆ ಮಾಡಿದೆ ಎಂದು ಸಮಿತಿ ಅಭಿಪ್ರಾಯ ಪಟ್ಟಿದೆ ಎಂದು ಅಮೆರಿಕದ ಸ್ಟ್ರಾಟೆಜಿಕ್​ ಕಮಾಂಡ್​ ಕಮಾಂಡರ್​ ಜನರಲ್​ ಜಾನ್​ ಎ ಹೈಟೆನ್​ ತಿಳಿಸಿದ್ದಾರೆ.
ನನ್ನ ಅಭಿಪ್ರಾಯದಲ್ಲಿ ಬಾಹ್ಯಾಕಾಶದಲ್ಲಿ ಮತ್ತಷ್ಟು ತ್ಯಾಜ್ಯ ಸೃಷ್ಟಿಯಾಗುವುದು ಬೇಡ. ಭಾರತ ನಡೆಸಿದ ಪರೀಕ್ಷೆಯಿಂದ ಸುಮಾರು 400 ತುಂಡುಗಳು ಸೃಷ್ಟಿಯಾಗಿದೆ. ಇವುಗಳಲ್ಲಿ 24 ತುಂಡುಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ ಎಂದಿದ್ದಾರೆ.
2007ರಲ್ಲಿ ಚೀನಾ ಉಪಗ್ರಹ ಹೊಡೆದುರುಳಿಸುವ ಪರೀಕ್ಷೆ ನಡೆಸಿತ್ತು. ಈ ಸಂದರ್ಭದಲ್ಲಿ ಉಪಗ್ರಹ ಮತ್ತು ಕ್ಷಿಪಣಿಯ 1 ಲಕ್ಷ ತುಂಡುಗಳು ಸೃಷ್ಟಿಯಾಗಿದ್ದವು. ಅವುಗಳಲ್ಲಿ ಬಹಳಷ್ಟು ತ್ಯಾಜ್ಯ ಇನ್ನೂ ಬಾಹ್ಯಾಕಾಶದಲ್ಲಿ ಉಳಿದಿದ್ದು, ಇತರ ಉಪಗ್ರಹ ಮತ್ತು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಅಪಾಯ ತಂದೊಡ್ಡುತ್ತಿವೆ ಎಂದು ಸೆನೆಟರ್​ ಟಿಮ್ ಕೈನೆ​ ಕಳವಳ ವ್ಯಕ್ತಪಡಿಸಿದ್ದಾರೆ.
ಕಳೆದ ಮಾರ್ಚ್ 27ರಂದು ಭಾರತ ಎ-ಸ್ಯಾಟ್​ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸುವ ಮೂಲಕ ಅಮೆರಿಕ, ರಷ್ಯಾ ಹಾಗೂ ಚೀನಾ ನಂತರ ಈ ತಂತ್ರಜ್ಞಾನ ಹೊಂದಿರುವ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
SCROLL FOR NEXT