ವಿದೇಶ

ಶ್ರೀಲಂಕಾ: ಇಸಿಸ್ ಉಗ್ರರ ಅಡಗುದಾಣಗಳ ಮೇಲೆ ಸೈನಿಕರ ದಾಳಿ; 3 ಉಗ್ರರು, 6 ಮಕ್ಕಳು ಸೇರಿ 15 ಮಂದಿ ಸಾವು!

Srinivasamurthy VN
ಕೊಲಂಬೋ: ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಉಗ್ರರ ದಾಳಿ ಮುಂದುವರೆದಿರುವಂತೆಯೇ ಅತ್ತ ಈಶಾನ್ಯ ಶ್ರೀಲಂಕಾದಲ್ಲಿದ್ದ ಶಂಕಿತ ಇಸ್ಲಾಮಿಕ್ ಸ್ಟೇಟ್ ಉಗ್ರರ ಅಡಗುದಾಣಗಳ ಮೇಲೆ ಸೈನಿಕರು ದಾಳಿ ನಡೆಸಿದ್ದು, ಈ ವೇಳೆ ನಡೆದ ಗುಂಡಿನ ದಾಳಿಯಲ್ಲಿ 6 ಮಕ್ಕಳು ಸೇರಿದಂತೆ ಒಟ್ಟು 15 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ಇಲ್ಲಿನ ಕಾಲ್ ಮುನೈ ಪ್ರಾಂತ್ಯದಲ್ಲಿ ಶ್ರೀಲಂಕಾ ಸೇನೆ ಮತ್ತು ಉಗ್ರರ ನಡುವೆ ಭೀಕರ ಗುಂಡಿನ ದಾಳಿ ನಡೆದಿದ್ದು, ಈ ವೇಳೆ ಉಗ್ರರ ಅಡಗುದಾಣದಲ್ಲಿ ಶೇಖರಿಸಿಡಲಾಗಿದ್ದ ಬಾಂಬ್ ಗಳನ್ನು ಉಗ್ರರೇ ಸ್ಫೋಟಿಸಿಕೊಂಡಿದ್ದಾರೆ. ಈ ವೇಳೆ ಮೂವರು ಶಂಕಿತ ಉಗ್ರರು ಸಾವನ್ನಪ್ಪಿದ್ದಾರೆ. 
ಈ ಬಗ್ಗೆ ಮಾಹಿತಿ ನೀಡಿರುವ ಶ್ರೀಲಂಕಾ ಪೊಲೀಸರು, ಈಶಾನ್ಯ ಶ್ರೀಲಂಕಾದಲ್ಲಿ ಇಸ್ಲಾಮಿಕ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಶಂಕಿತ ಉಗ್ರರು ಅಡಗಿರುವ ಕುರಿತು ಮಾಹಿತಿ ಲಭ್ಯವಾಗಿತ್ತು. ಈ ವೇಳೆ ತತ್ ಕ್ಷಣದ ಸೇನಾ ಕಾರ್ಯಾಚರಣೆ ನಡೆಸಲಾಗಿದ್ದು, ಕಾರ್ಯಾಚರಣೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರು, ಆರು ಮಂದಿ ಮಕ್ಕಳು ಸೇರಿದಂತೆ ಒಟ್ಟು 15 ಮಂದಿ ಸಾವಿಗೀಡಾಗಿದ್ದಾರೆ. ಶಂಕಿತ ಪ್ರದೇಶವನ್ನು ಸೇನೆ ಸುತ್ತುವರೆದಾಗ ಉಗ್ರರು ಬಾಂಬ್ ಸ್ಫೋಟಿಸಿದ್ದಾರೆ. ಈ ವೇಳೆ ಮೂವರು ಉಗ್ರರು ಸಾವನ್ನಪ್ಪಿದ್ದು, ಬಳಿಕ ನಡೆದ ಗುಂಡಿನ ಚಕಮಕಿಯಲ್ಲಿ ಆರು ಮಕ್ಕಳು ಹಾಗೂ ಹಲವು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದ ಶಂಕಿತ ಉಗ್ರರ ಶವಗಳನ್ನು ಶ್ರೀಲಂಕಾ ಸೇನಾಪಡೆಗಳು ವಶಕ್ಕೆ ಪಡೆದಿವೆ. ಅಂತೆಯೇ ಕಾಲ್ ಮುನೈ ಪಟ್ಟಣದ ಇನ್ನೂ ಮೂರು ಮನೆಗಳಲ್ಲಿ ಉಗ್ರರು ಅಡಗಿ ಕುಳಿತಿದ್ದು, ಶ್ರೀಲಂಕಾ ಸೇನೆ ಕಾರ್ಯಾಚರಣೆ ಮುಂದುವರೆಸಿದೆ. ಇನ್ನು ಗುಂಡಿನ ಚಕಮಕಿಯಲ್ಲಿ ಶ್ರೀಲಂಕಾ ಸೇನೆಪಡೆಯಲ್ಲಿನ ಯೋಧರಿಗೆ ಸಾವುನೋವಾದ ಕುರಿತು ಮಾಹಿತಿ ಲಭ್ಯವಾಗಿಲ್ಲ.
SCROLL FOR NEXT