ವಿದೇಶ

ಕ್ರೀಡೆ, ಸಂಸ್ಕೃತಿ ಮತ್ತು ಪಾರಂಪರಿಕ ಔಷಧ ವಲಯದಲ್ಲಿ ಭಾರತ – ಚೀನಾ ಸಹಿ

Srinivasamurthy VN

ಬೀಜಿಂಗ್: ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುತ್ತಿದ್ದ ವಿಧಿ 370 ರದ್ಧತಿ ಬೆನ್ನಲ್ಲೇ ಭಾರತ ಮತ್ತು ಚೀನಾ ದೇಶಗಳು 4 ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿವೆ.

ಮೂಲಗಳ ಪ್ರಕಾರ ಕ್ರೀಡೆ, ಸಂಸ್ಕೃತಿ ಮತ್ತು ಪಾರಂಪರಿಕ ಔಷಧ ಸೇರಿದಂತೆ ನಾಲ್ಕು ಒಪ್ಪಂದಗಳಿಗೆ ಭಾರತ ಮತ್ತು ಚೀನಾ ಸೋಮವಾರ ಸಹಿ ಹಾಕಿದ್ದು, ವಿದೇಶಾಂಗ ಸಚಿವ ಡಾ. ಎಸ್‌.ಜೈಶಂಕರ್ ಅವರ ಮೂರು ದಿನಗಳ ಚೀನಾ ಭೇಟಿ ಸಂದರ್ಭದಲ್ಲಿ ಈ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.

ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಸಹಕಾರ 2020 ರ ಅನುಷ್ಠಾನ ಸಂಬಂಧ ಒಪ್ಪಂದದಲ್ಲಿ ಮಾರ್ಗಸೂಚಿಗಳಿವೆ. ಈ ಒಪ್ಪಂದಕ್ಕೆ ವಿದೇಶಾಂಗ ಸಚಿವ ಡಾ. ಎಸ್‌.ಜೈಶಂಕರ್ ಮತ್ತು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಸಹಿ ಹಾಕಿದ್ದಾರೆ. ಚೀನಾ ಹಾಗೂ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದೊಂದಿಗೆ ಕ್ರೀಡಾ ಸಹಕಾರ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಭಾರತದ ಕ್ರೀಡಾ ಕಾರ್ಯದರ್ಶಿ ರಾಥೇ ಶ್ಯಾಮ್ ಜುಲಾನಿಯಾ ಮತ್ತು ಚೀನಾದ ಕ್ರೀಡಾ ಆಡಳಿತದ ಉಪ ಮಹಾನಿರ್ದೇಶಕ ಗಾವೋ ಜಿ಼ದಾನ್ ಸಹಿ ಹಾಕಿದ್ದಾರೆ.

ಚೀನಾದ ಭಾರತ ರಾಯಭಾರಿ ವಿಕ್ರಂ ಮಿಸ್ರಿ ಸಾಂಸ್ಕೃತಿ ವಿನಿಮಯ ಮತ್ತು ಪಾರಂಪರಿ ಔಷಧ ಸಂಬಂಧ ಎರಡು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ. ಚೀನಾ ವಿದೇಶಾಂಗ ಸಚಿವರೊಂದಿಗಿನ ಚರ್ಚೆ ಬಳಿಕ ಮಾತನಾಡಿದ ಜೈಶಂಕರ್, ಉಭಯ ದೇಶಗಳ ನಡುವೆ ಫಲಪ್ರದ ಮಾತುಕತೆ ನಡೆದಿದ್ದು ಬಾಂಧವ್ಯ ವೃದ್ಧಿ ಸಂಬಂಧ ಹೊಸ ಮಾರ್ಗಗಳ ಬಗೆಗೆ ಚರ್ಚಿಸಲಾಯಿತು ಎಂದರು.
ಭಾರತ – ಚೀನಾ ಸಾಂಸ್ಕೃತಿಕ ವಿನಿಮಯ ಕುರಿತ ಉನ್ನತ ಮಟ್ಟದ ವ್ಯವಸ್ಥೆಯ ಎರಡನೇ ಸಭೆಯ ಸಹ ಅಧ್ಯಕ್ಷತೆ ವಹಿಸಲು ಡಾ. ಜೈಶಂಕರ್ ಮೂರು ದಿನಗಳ ಚೀನಾ ಪ್ರವಾಸ ಕೈಗೊಂಡಿದ್ದಾರೆ.

ಈ ವರ್ಷದ ಮುಂಬರುವ ಉನ್ನತ ಮಟ್ಟದ ಭೇಟಿ, ಉಭಯ ರಾಷ್ಟ್ರಗಳ ಹಿತಾಸಕ್ತಿಯ ಇತರೆ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಜೈಶಂಕರ್ ಚರ್ಚೆ ನಡೆಸಲಿದ್ದಾರೆ ಎಂದು ಅವರ ಭೇಟಿ ಮುನ್ನ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿತ್ತು.

SCROLL FOR NEXT