ವಿದೇಶ

ಭಾರತದ ವಿರುದ್ದ ಅಂತಾರಾಷ್ಟ್ರೀಯ ಹೋರಾಟ ಕಷ್ಟ; ಕೊನೆಗೂ ಸೋಲೊಪ್ಪಿಕೊಂಡ ಪಾಕ್

Srinivasamurthy VN

ಕಾಶ್ಮೀರ ವಿಚಾರವಾಗಿ ಭಾರತವನ್ನು ತಪ್ಪಿತಸ್ಥ ದೇಶವನ್ನಾಗಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿರು ಪಾಕಿಸ್ತಾನ

ಇಸ್ಲಾಮಾಬಾದ್: ಕಾಶ್ಮೀರ ವಿಚಾರವಾಗಿ ಭಾರತದ ವಿರುದ್ಧ ಅಂತಾರಾಷ್ಟ್ರೀಯ ಹೋರಾಟ ಕಷ್ಟ ಎಂದು ಹೇಳುವ ಮೂಲಕ ಕೊನೆಗೂ ಪಾಕಿಸ್ತಾನ ತನ್ನ ಸೋಲು ಒಪ್ಪಿಕೊಂಡಿದೆ.

ಜಮ್ಮು ಮತ್ತು ಕಾಶ್ಮೀರ ವಿಭಜನೆ, ಸಂವಿಧಾನದ  370 ನೇ ವಿಧಿ ರದ್ದುಗೊಳಿಸಿದ ಭಾರತದ ಕ್ರಮಗಳ ವಿರುದ್ದ ನೆರೆಯ ದೇಶ ಪಾಕಿಸ್ತಾನ ಆಕ್ರೋಶ ವ್ಯಕ್ತಪಡಿಸುತ್ತಿರುವ ಸಂಗತಿ ಎಲ್ಲರಿಗೂ ತಿಳಿದಿರುವ ವಿಷಯ. ಕಾಶ್ಮೀರ ವಿಭಜನೆಯ ವಿಷಯವನ್ನೇ ಮುಂದೆ ಮಾಡಿ ಭಾರತವನ್ನು ಅಂತಾರಾಷ್ಟ್ರೀಯ ಸಮುದಾಯದ ಮುಂದೆ  “ತಪ್ಪಿತಸ್ಥ” ದೇಶವನ್ನಾಗಿಸಲು ಪಾಕಿಸ್ತಾನ ನಡೆಸಿದ ಇನ್ನಿಲ್ಲದ ಪ್ರಯತ್ನಗಳಿಗೆ ನಿರಾಶೆಯಾಗಿದೆ. 

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುವ ವಿಧಿ 370ರನ್ನು ರದ್ದುಗೊಳಿಸಿ ಪಾಕಿಸ್ತಾನದ ಕೆಂಗಣ್ಣಿಗೆ ಗುರಿಯಾಗಿರುವ ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸುವ ಪಾಕಿಸ್ತಾನದ ಎಲ್ಲ ಪ್ರಯತ್ನಗಳೂ ವಿಫಲವಾಗಿದ್ದು, ಇದೇ ವಿಚಾರವಾಗಿ ಮಾತನಾಡಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಭಾರತದ ವಿರುದ್ದ ಅಂತಾರಾಷ್ಟ್ರೀಯ ಹೋರಾಟ ಕಷ್ಟ ಎಂದು ಹೇಳಿದ್ದಾರೆ.

 ಕಾಶ್ಮೀರ ಕುರಿತ ಭಾರತ ಕೈಗೊಂಡ ನಿರ್ಧಾರ ವಿರುದ್ದ ನಮ್ಮನ್ನು  ಅಂತಾರಾಷ್ಟ್ರೀಯ ಸಮುದಾಯ ಬೆಂಬಲಿಸುವ ಸಾಧ್ಯತೆ ಇಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಕಾಶ್ಮೀರ  ಕುರಿತು  ಭಾರತ ವಿರುದ್ಧ ಪಾಕಿಸ್ತಾನ ನೀಡಿದ  ದೂರನ್ನು ಸ್ವೀಕರಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಿದ್ಧವಿಲ್ಲ  ಎಂದು ಖುರೇಷಿ ಸ್ಪಷ್ಟಪಡಿಸಿದ್ದಾರೆ.  

ಈ ಸಂದರ್ಭದಲ್ಲಿ ಅವರು, "ಕಾಶ್ಮೀರ ವಿಷಯ ಬಳಸಿ ಭಾವನೆಗಳನ್ನು ಕೆರಳಿಸುವುದು ಹಾಗೂ ಆಕ್ಷೇಪ ವ್ಯಕ್ತಪಡಿಸುವುದು ಸುಲಭ. ಆದರೆ, ಈ ವಿಷಯದಲ್ಲಿ ಮುಂದೆ ಸಾಗುವುದು ತುಂಬಾ ಕಷ್ಟ. ಈ ವಿಚಾರದಲ್ಲಿ  ಪಾಕಿಸ್ತಾನವನ್ನು   ಹೂವಿನ ಹಾರ ಸ್ವಾಗತಿಸಲು ವಿಶ್ವಸಂಸ್ಥೆ ಸಿದ್ಧವಾಗಿಲ್ಲ ಎಂದು ಹೇಳಿದ್ದಾರೆ.  ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯ ದೇಶಗಳ ಪೈಕಿ ಯಾವುದಾದರೂ ಸದಸ್ಯ ರಾಷ್ಟ್ರ ನಮಗೆ ಅಡ್ಡಿಪಡಿಸಬಹುದು. ಜನರು  ವಿವೇಕಯುತವಾಗಿ ಆಲೋಚಿಸಬೇಕು ಎಂದು ಖುರೇಷಿ ಆಗ್ರಹಿಸಿದ್ದಾರೆ. ಕಾಶ್ಮೀರ ಕುರಿತು ಭಾರತದ ನಿರ್ಧಾರವನ್ನು ರಷ್ಯಾ ಬೆಂಬಲಿಸಿದ ನಂತರ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

SCROLL FOR NEXT