ವಿದೇಶ

ಭಾರತ-ಅಮೆರಿಕಾ ಸಂಬಂಧ ಕಳೆದ ಎರಡು ದಶಕಗಳಲ್ಲಿ ಪ್ರವರ್ಧಮಾನಕ್ಕೆ ಬಂದಿದೆ: ಮೈಕ್ ಪೊಂಪಿಯೊ 

Sumana Upadhyaya

ವಾಷಿಂಗ್ಟನ್: ಭಾರತದ 73ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಶುಭಾಶಯ ತಿಳಿಸಿರುವ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ, ಕಳೆದ ಎರಡು ದಶಕಗಳಿಂದ ಭಾರತ-ಅಮೆರಿಕಾ ನಡುವಿನ ಬಾಂಧವ್ಯ ಕಾರ್ಯತಂತ್ರದ ಸಹಭಾಗಿತ್ವವಾಗಿ ಬೆಳೆದಿದೆ ಎಂದು ಹೇಳಿದ್ದಾರೆ.


ಎರಡೂ ರಾಷ್ಟ್ರಗಳು ಹಂಚಿಕೊಂಡಿರುವ ಪ್ರಜಾಸತ್ತಾತ್ಮಕ ಮೌಲ್ಯಗಳು, ಜನರ ನಡುವಣ ಬಲವಾದ ಸಂಬಂಧ ಮತ್ತು ಆರ್ಥಿಕ ಬೆಳವಣಿಗೆಯ ಮೇಲಿನ ಬದ್ಧತೆ ಸಂಬಂಧಗಳ ಬಲವರ್ಧನೆಗೆ ಮತ್ತಷ್ಟು ಗಟ್ಟಿಗೊಳಿಸಿದೆ ಎಂದಿದ್ದಾರೆ.


ಕಳೆದೆರಡು ದಶಕಗಳಲ್ಲಿ ನಮ್ಮ ಸ್ನೇಹತ್ವ ಕಾರ್ಯತಂತ್ರದ ಸಹಭಾಗಿತ್ವವಾಗಿ ಬೆಳೆದಿದ್ದು ಎರಡೂ ದೇಶಗಳು ಪ್ರಮುಖ ವಿಷಯಗಳ ಮೇಲೆ ಸಹಕಾರಕ್ಕೆ ವಿಶೇಷ ಆದ್ಯತೆ ನೀಡುತ್ತಿವೆ. ರಕ್ಷಣಾ ವಿಷಯಗಳಿಂದ ಹಿಡಿದು ಭಯೋತ್ಪಾದನೆ ನಿಗ್ರಹದವರೆಗೆ, ನೌಕಾಯಾನ ಸ್ವತಂತ್ರತೆ, ಬಾಹ್ಯಾಕಾಶ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಸಹಕಾರ ನೀಡುತ್ತಿದ್ದೇವೆ ಎಂದು ಪೊಂಪಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ. 


ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ವೇಳೆ ಹೇಳಿರುವಂತೆ ಭಾರತ ಮತ್ತು ಅಮೆರಿಕಾ ವಿಶ್ವದಲ್ಲಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿದ್ದು, ಜಾಗತಿಕವಾಗಿಯೂ ಶಕ್ತಿಶಾಲಿ ರಾಷ್ಟ್ರಗಳು ಪರಸ್ಪರ ಸ್ನೇಹಿತರಾಗಿವೆ. ಭಾರತೀಯರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಎಂದು ಹೇಳಿದ್ದಾರೆ.

SCROLL FOR NEXT