ವಿದೇಶ

ವಿಶ್ವಸಂಸ್ಥೆ: ಕುತಂತ್ರಕ್ಕೆ ಭಾರತ ಪ್ರತಿತಂತ್ರ; ಕೊನೇ ಕ್ಷಣದಲ್ಲಿ ಮಂಡಿಯೂರಿದ ಚೀನಾ

Srinivasamurthy VN
ವಾಷಿಂಗ್ಟನ್: ಪುಲ್ವಾಮ ಉಗ್ರ ದಾಳಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ರಕ್ಷಣೆಗೆ ನಿಂತಿದ್ದ ಚೀನಾ ಕೊನೆಗೂ ಭಾರತದ ತಂತ್ರಗಾರಿಕೆಗೆ ಮುಂಡಿಯೂರಿದ್ದು, ಚೀನಾ ಹೂಡಿದ್ದ ಎಲ್ಲ ಕುತಂತ್ರಗಳನ್ನೂ ಭಾರತ ವಿಫಲಗೊಳಿಸಿದೆ.
ವಿಶ್ವಸಂಸ್ಥೆಯಲ್ಲಿ ಚೀನಾ ವಿರೋಧದ ಹೊರತಾಗಿಯೂ ಪುಲ್ವಾಮ ಉಗ್ರ ದಾಳಿಯನ್ನು ಖಂಡಿಸಿದ್ದು ಮಾತ್ರವಲ್ಲದೇ, ದಾಳಿ ಹೊಣೆಯನ್ನು ಹೊತ್ತ ಜೈಶ್ ಉ ಮೊಹಮದ್ ಉಗ್ರ ಸಂಘಟನೆ ಪಾತ್ರದ ಕುರಿತೂ ಟೀಕೆ ಮಾಡಲಾಗಿದೆ. ಆ ಮೂಲಕ ಚೀನಾ ಹೂಡಿದ್ದ ಎಲ್ಲ ಕುತಂತ್ರಗಳೂ ವಿಫಲವಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಮೇಲುಗೈ ಸಾಧಿಸಿದಂತಾಗಿದೆ.
ಅಲ್ಲದೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿರುವ ಶಾಶ್ವತ ಹಾಗೂ ತಾತ್ಕಾಲಿಕ ಸದಸ್ಯ ರಾಷ್ಟ್ರಗಳೂ ಕೂಡ ಉಗ್ರ ದಾಳಿಗೆ ಸಂಬಂಧಿಸಿದಂತೆ ಭಾರತದೊಂದಿಗೆ ಸಹಕರಿಸಬೇಕು ಎಂದು ಭದ್ರತಾ ಮಂಡಳಿಯಲ್ಲಿ ಅವಿರೋಧ ನಿರ್ಣಯ ಕೈಗೊಳ್ಳಲಾಗಿದೆ. ಇದಕ್ಕೂ ಮುಖ್ಯವಾಗಿ, ಎಲ್ಲ ದೇಶಗಳು ಅಂತಾರಾಷ್ಟ್ರೀಯ ಕಾನೂನು ಹಾಗೂ ಸಂಬಂಧಿಸಿದ ಭದ್ರತಾ ಸಮಿತಿಯ ನಿರ್ಣಯಗಳು, ಸಕ್ರಿಯವಾದ ಸಹಕಾರದೊಂದಿಗೆ ಭಾರತ ಸರ್ಕಾರದ ಜತೆಗೆ ತಮ್ಮ ಜವಾಬ್ದಾರಿ ನಿರ್ವಹಿಸಬೇಕು. ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಸಹಕಾರ ನೀಡಿ, ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಭಾರತದ ಪ್ರಯತ್ನಕ್ಕೆ ಚೀನಾ ಅಡ್ಡಗಾಲು, ಜೆಇಎಂ ಹೆಸರು ಪ್ರಸ್ತಾಪವಾಗದಂತೆ ತಡೆಯಲು ಹರಸಾಹಸ
ಮೂಲಗಳ ಪ್ರಕಾರ ಈ ಹೇಳಿಕೆ ನೀಡದಿರುವಂತೆ ತಡೆಯಲು ಚೀನಾ ಬಹಳ ಯತ್ನಿಸಿದೆ. ಚೀನಾಗೆ ಜೈಶ್ ಇ ಮೊಹಮದ್ ಹೆಸರಿನ ಪ್ರಸ್ತಾಪವಾಗುವುದು ಬೇಕಿರಲಿಲ್ಲ. ಜತೆಗೆ ಭಾರತದ ಆಡಳಿತದಲ್ಲಿರುವ ಕಾಶ್ಮೀರ ಎಂದು ಕರೆಯುವುದು ಬೇಕಿತ್ತು. ಆದರೆ ಆ ಅಂಶಕ್ಕೂ ಹಿನ್ನಡೆಯಾಗಿದೆ. ಎಲ್ಲ ದೇಶಗಳೂ ಸಕ್ರಿಯವಾಗಿ ಭಾರತ ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ವಿಶ್ವಸಂಸ್ಥೆ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪಾಕಿಸ್ತಾನದ ಪಾಲಿಗೆ 'ಸರ್ವಋತು ಸ್ನೇಹಿ' ದೇಶವಾಗಿರುವ ಚೀನಾ, ಕಳೆದ ಕೆಲವು ವರ್ಷಗಳಿಂದ ವಿಶ್ವಸಂಸ್ಥೆಯಲ್ಲಿ ತನ್ನ ವಿಟೋ ಶಕ್ತಿ ಬಳಸಿ, ಜೈಶ್ ಇ ಮೊಹ್ಮದ್ ಉಗ್ರ ಸಂಘಟನೆಯ ಮಸೂದ್ ಅಜರ್ ನನ್ನು ಬಚಾವ್ ಮಾಡುತ್ತಿದೆ. ಅಜರ್ ನನ್ನು ಜಾಗತಿಕ ಉಗ್ರ ಎಂದು ಘೋಷಣೆ ಮಾಡಬೇಕು ಎಂಬ ಭಾರತದ ಪ್ರಸ್ತಾವಕ್ಕೆ ಹಿನ್ನಡೆ ಆಗುವಂತೆ ಚೀನಾ ಮಾಡುತ್ತಿದೆ. ಇದೀಗ ಪುಲ್ವಾಮಾ ಉಗ್ರ ದಾಳಿಯ ನಂತರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಏಕಾಂಗಿ ಮಾಡಲು ಭಾರತ ಕ್ರಮ ತೆಗೆದುಕೊಳ್ಳುತ್ತಿದೆ. ಅತ್ಯಾಪ್ತ ರಾಷ್ಟ್ರ ಎಂದು ಪಾಕಿಸ್ತಾನಕ್ಕೆ ನೀಡಿದ್ದ ಸ್ಥಾನವನ್ನು ಕೂಡ ಹಿಂಪಡೆದಿದೆ. ಜತೆಗೆ ಪಾಕಿಸ್ತಾನದಿಂದ ಭಾರತಕ್ಕೆ ಆಮದಾಗುವ ವಸ್ತುಗಳ ಮೇಲೆ ಶೇಕಡಾ 200ರಷ್ಟು ಸುಂಕ ವಿಧಿಸಿದೆ. ಅಲ್ಲದೆ ಭಾರತೀಯ ರೈತರೇ ಸ್ವಯಂ ಪ್ರೇರಿತವಾಗಿ ಪಾಕಿಸ್ತಾನಕ್ಕೆ ರಫ್ತಾಗುತ್ತಿದ್ದ ಟೊಮೆಟೋ ಬೆಳೆಗಳನ್ನು ರಫ್ತು ಮಾಡುವುದಿಲ್ಲ ಎಂದು ಘೋಷಣೆ ಮಾಡಿದ್ದು, ಪಾಕ್ ನಲ್ಲಿ ಇದೀಗ ಟೊಮೆಟೋ ಕೊರತೆಯ ಆತಂಕ ಸೃಷ್ಟಿಯಾಗಿದೆ.
SCROLL FOR NEXT