ವಿದೇಶ

ಗಡಿಯಾಚೆಗಿನ ಭಯೋತ್ಪಾದನೆ ನಿಗ್ರಹಿಸುವ ಹಕ್ಕು ಭಾರತಕ್ಕಿದೆ: ಭಾರತದ ಬೆನ್ನಿಗೆ ನಿಂತ ಫ್ರಾನ್ಸ್

Srinivasamurthy VN
ಪ್ಯಾರಿಸ್: ದೇಶದ ಭದ್ರತೆಗೆ ಆತಂಕವಾಗಿರುವ ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿಗ್ರಹಿಸುವ ಹಕ್ಕು ಭಾರತಕ್ಕಿದೆ ಎಂದು ಹೇಳುವ ಮೂಲಕ ಪಿಒಕೆಯಲ್ಲಿ ವಾಯುದಾಳಿ ಮಾಡಿದ ಭಾರತಕ್ಕೆ ಫ್ರಾನ್ಸ್ ದೇಶ ಬೆಂಬಲ ವ್ಯಕ್ತಪಡಸಿದೆ.
ಭಾರತೀಯ ವಾಯುಸೇನೆ ವಾಯುದಾಳಿ ನಡೆಸಿದ ವಿಚಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಬೆನ್ನಲ್ಲೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಫ್ರಾನ್ಸ್ ಸರ್ಕಾರ, ಪುಲ್ವಾಮ ಉಗ್ರ ದಾಳಿ ಪ್ರಕರಣವನ್ನು ಮುಂದಿಟ್ಟುಕೊಂಡು ಪಾಕಿಸ್ತಾನದ ಕಿವಿ ಹಿಂಡಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಫ್ರಾನ್ಸ್ ಸರ್ಕಾರದ ವಕ್ತಾರರು, 40 ಸೈನಿಕರ ಸಾವಿಗೆ ಕಾರಣವಾದ ಪುಲ್ವಾಮ ಉಗ್ರ ದಾಳಿ ಅತ್ಯಂತ ಖಂಡನೀಯ.. ಉಗ್ರರ ಹೇಡಿತನದ ಕೃತ್ಯವನ್ನು ಫ್ರಾನ್ಸ್ ಸರ್ಕಾರ ಖಂಡಿಸುತ್ತದೆ. ಪಾಕಿಸ್ತಾನ ಮೂಲದ ಜೈಶ್ ಇ ಮೊಹಮದ್ ಉಗ್ರ ಸಂಘಟನೆ ಪುಲ್ವಾಮ ಉಗ್ರ ದಾಳಿಯ ಹೊಣೆ ಹೊತ್ತಿದ್ದು, ಉಗ್ರ ದಾಳಿಯ ಮೂಲ ಪಾಕಿಸ್ತಾನದಲ್ಲೇ ಇದೆ. ಹೀಗಾಗಿ ಪಾಕಿಸ್ತಾನ ಕೂಡಲೇ ಉಗ್ರರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಅಲ್ಲದೆ ಗಡಿಯಲ್ಲಿ ಅವ್ಯಾಹತವಾಗಿ ತಲೆ ಎತ್ತಿರುವ ಉಗ್ರ ತರಬೇತಿ ಕ್ಯಾಂಪ್ ಗಳ ಮೇಲೆ ದಾಳಿ ಮಾಡಿ ತೆರವು ಮಾಡಬೇಕು ಎಂದು ಫ್ರಾನ್ಸ್ ಆಗ್ರಹಿಸಿದೆ.
ಅಂತೆಯೇ ತನ್ನ ದೇಶದ ಹಿತಾಸಕ್ತಿ ಮತ್ತು ಭದ್ರತೆ ಕಾಯ್ದುಕೊಳ್ಳಲು ಭಾರತ ಸ್ವತಂತ್ರವಾಗಿದ್ದು, ಯಾವುದೇ ರೀತಿಯ ನಿರ್ಣಯ ಕೈಗೊಳ್ಳಲು ಶಕ್ತವಾಗಿದೆ. ಆಂತರಿಕ ಭದ್ರತೆಗಾಗಿ ಭಾರತ ಕೈಗೊಳ್ಳುವ ಯಾವುದೇ ನಿರ್ಧಾರಕ್ಕೆ ಫ್ರಾನ್ಸ್ ಸರ್ಕಾರದ ಬೆಂಬಲವಿರುತ್ತದೆ ಎಂದು ಫ್ರಾನ್ಸ್ ಸ್ಪಷ್ಟಪಡಿಸಿದೆ.
SCROLL FOR NEXT