ವಿದೇಶ

ಕುಲಭೂಷಣ್ ಜಾಧವ್ ಕುರಿತು ಐಸಿಜೆ ತೀರ್ಪು ಶ್ಲಾಘನಾರ್ಹ: ಅಚ್ಚರಿ ಮೂಡಿಸಿದ ಪಾಕ್ ಪ್ರಧಾನಿ ಹೇಳಿಕೆ

Srinivasamurthy VN
ಇಸ್ಲಾಮಾಬಾದ್: ಕುಲಭೂಷಣ್ ಜಾಧವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಗ್ ನಲ್ಲಿರುವ ಅಂತಾರಾಷ್ಟ್ರೀಯ ಕೋರ್ಟ್ ನೀಡಿರುವ ತೀರ್ಪನ್ನು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸ್ವಾಗತಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು, ಅಂತಾರಾಷ್ಟ್ರೀಯ ಕೋರ್ಟ್ ನ ತೀರ್ಪು ಶ್ಲಾಘನಾರ್ಹ. ಕೋರ್ಟ್ ಕುಲಭೂಷಣ್ ಜಾಧವ್ ತಪ್ಪಿತಸ್ಥನಲ್ಲ ಎಂದು ಹೇಳಿಲ್ಲ. ಅಲ್ಲದೆ ಆತನನ್ನು ಬಿಡುಗಡೆ ಮಾಡಿ ಎಂದೂ ಆದೇಶಿಸಿಲ್ಲ. ಹೀಗಾಗಿ ಪಾಕಿಸ್ತಾನ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಮುಂದಿನ ಕ್ರಮ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಅಂತೆಯೇ ಕುಲಭೂಷಣ್ ಜಾಧವ್ ಪಾಕಿಸ್ತಾನದ ಜನರ ವಿರುದ್ಧದ ಅಪರಾಧಗಳಲ್ಲಿ ಅಪರಾಧಿಯಾಗಿದ್ದು, ಕಾನೂನಾತ್ಮಕವಾಗಿಯೇ ಆತನ ವಿರುದ್ಧ ಮುಂದುವರೆಯುತ್ತೇವೆ ಎಂದು ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ.
ಇನ್ನು ನಿನ್ನೆ ಕುಲಭೂಷಣ್ ಜಾಧವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದ್ದ ಅಂತಾರಾಷ್ಟ್ರೀಯ ಕೋರ್ಟ್, ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್‌ (49 ವರ್ಷ) ಅವರಿಗೆ ಪಾಕಿಸ್ತಾನದ ಸೇನಾ ನ್ಯಾಯಾಲಯವು ನೀಡಿದ್ದ ಮರಣದಂಡನೆಯನ್ನು ರದ್ದುಗೊಳಿಸಿದ್ದು, ಪಾಕಿಸ್ತಾನದ ತೀರ್ಪನ್ನು ಮರುಪರಿಶೀಲನೆ ನಡೆಸುವಂತೆ ಸೂಚನೆ ನೀಡಿದೆ. ನ್ಯಾಯಾಧೀಶ ಅಬ್ದುಲ್‌ ಕ್ವಾವಿ ಅಹ್ಮದ್‌ ಯೂಸುಫ್‌ ನೇತೃತ್ವದ 15 ಮಂದಿ ಸದಸ್ಯರ ಅಂತರರಾಷ್ಟ್ರೀಯ ನ್ಯಾಯಾಲಯದ ನ್ಯಾಯಪೀಠವು ಪ್ರಕರಣದ ವಿಚಾರಣೆಯನ್ನು ಕಳೆದ ಫೆಬ್ರುವರಿ ತಿಂಗಳಲ್ಲಿ ಪೂರ್ಣಗೊಳಿಸಿತ್ತು. ಇದಾಗಿ ಐದು ತಿಂಗಳ ಬಳಿಕ ತೀರ್ಪು ಹೊರಬಂದಿದೆ.
2017ರಲ್ಲಿ ಜಾಧವ್‌ ಅವರನ್ನು ಪಾಕಿಸ್ತಾನ ಬಂಧಿಸಿತ್ತು. ಇವರ ವಿಚಾರಣೆ ನಡೆಸಿದ್ದ ಪಾಕಿಸ್ತಾನದ ಸೇನಾ ನ್ಯಾಯಾಲಯವು, ‘ಜಾಧವ್‌ ಬಲೂಚಿಸ್ತಾನವನ್ನು ಅಸ್ಥಿರಗೊಳಿಸಲು ದೇಶದೊಳಗೆ ನುಸುಳಿ ಬಂದಿರುವ ಭಾರತೀಯ ಗೂಢಚಾರ’ ಎಂದು ಆರೋಪಿಸಿ, ಅವರಿಗೆ ಮರಣದಂಡನೆ ವಿಧಿಸಿತ್ತು. ಈ ತೀರ್ಪಿನ ವಿರುದ್ಧ ಅಂತರರಾಷ್ಟ್ರೀಯ ನ್ಯಾಯಾಲಯದ ಮೊರೆಹೋಗಿದ್ದ ಭಾರತವು, ‘ಜಾಧವ್‌ ಅವರ ವಿಚಾರಣೆಯನ್ನು ನ್ಯಾಯಬದ್ಧವಾಗಿ ನಡೆಸಿಲ್ಲ. ಪಾಕಿಸ್ತಾನವು ಅವರಿಗೆ ರಾಜತಾಂತ್ರಿಕ ನೆರವನ್ನು ನಿರಾಕರಿಸಿತ್ತು. ಅದು ವಿಯೆನ್ನಾ ಒಪ್ಪಂದದ ಉಲ್ಲಂಘನೆಯಾಗುತ್ತದೆ’ ಎಂದು ವಾದಿಸಿತ್ತು.
SCROLL FOR NEXT