ವಿದೇಶ

ಭಾರತೀಯ ರಾಯಭಾರ ಕಚೇರಿಯಲ್ಲಿ ಇಫ್ತಾರ್ ಔತಣಕೂಟ, ಅಧಿಕಾರಿಗಳಿಗೆ ಪಾಕ್ ಸೇನಾಪಡೆಗಳ ಕಿರುಕುಳ

Srinivasamurthy VN
ಇಸ್ಲಾಮಾಬಾದ್: ಪವಿತ್ರ ರಂಜಾನ್​ ಮಾಸದ ನಿಮಿತ್ತ ಪಾಕಿಸ್ತಾನದಲ್ಲಿನ ಭಾರತೀಯ ರಾಯಭಾರ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಇಫ್ತಾರ್​ ಕೂಟದಲ್ಲಿ ಭಾರತೀಯ ಅಧಿಕಾರಿಗಳಿಗೆ ಪಾಕ್ ಸೇನಾಪಡೆ ಅಧಿಕಾರಿಗಳು ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಅಧಿಕಾರಿಗಳು ಇಫ್ತಾರ್ ಔತಣಕೂಟ ಆಯೋಜಿಸಿದ್ದರು. ಭಾರತದ ರಾಯಭಾರ ಕಚೇರಿ ಅಧಿಕಾರಿಗಳು ಇಸ್ಲಾಮಾಬಾದ್​ನ ಹೋಟೆಲ್​ ಸೆರೆನಾದಲ್ಲಿ ಇಫ್ತಾರ್​ ಕೂಟ ಆಯೋಜಿಸಿದ್ದರು. ಪಾಕಿಸ್ತಾನದ ಹಲವು ಅತಿಗಣ್ಯ, ಗಣ್ಯ ವ್ಯಕ್ತಿಗಳು ಸೇರಿ ಸಹಸ್ರಾರು ಜನರನ್ನು ಕೂಟಕ್ಕೆ ಆಹ್ವಾನಿಸಿದ್ದರು. ಆಹ್ವಾನ ಮನ್ನಿಸಿ ದೊಡ್ಡ ಸಂಖ್ಯೆಯಲ್ಲಿ ಅತಿಥಿಗಳು ಆಗಮಿಸಿದ್ದರು.
ಆದರೆ, ಹೋಟೆಲ್​ ಅನ್ನು ಸುತ್ತುವರಿದ ಪಾಕ್​ ಸೇನಾಪಡೆ ಯೋಧರು ಇಫ್ತಾರ್​ ಕೂಟಕ್ಕೆ ಆಗಮಿಸುತ್ತಿದ್ದ ಅತಿಥಿಗಳಿಗೆ ಪ್ರಾಣಭೀತಿ ಒಡ್ಡಿದ್ದಲ್ಲದೆ, ಮೊನಚಾದ ಮಾತುಗಳಿಂದ ಚುಚ್ಚಿ ಮಾನಸಿಕ ಕಿರುಕುಳ ನೀಡಿದರು. ಅವರೆಲ್ಲರನ್ನೂ ಅವಮಾನಿಸಿ ಕೂಟದಲ್ಲಿ ಪಾಲ್ಗೊಳ್ಳದೆ ಹಾಗೆಯೇ ಹಿಂದಿರುಗುವಂತೆ ಮಾಡಿದ್ದಾಗಿ ಭಾರತದ ರಾಯಭಾರ ಕಚೇರಿ ಅಧಿಕಾರಿಗಳು ದೂರಿದ್ದಾರೆ.
ಕೂಟದಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನದ ನೂರಾರು ಗಣ್ಯರು ಕೂಡ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಭದ್ರತೆಗೆ ಆಗಮಿಸಿದ್ದ ಪಾಕ್​ ಸೇನಾ ಸಿಬ್ಬಂದಿ ಗಣ್ಯರಿಗೆ ಪ್ರಾಣ ಭೀತಿ ಒಡ್ಡಿದ್ದಲ್ಲದೆ, ನಾನಾ ಬಗೆಯ ಕಿರುಕುಳ ಕೊಟ್ಟು, ಅವಮಾನ ಮಾಡಿ ವಾಪಸು ಕಳುಹಿಸಿದ್ದಾರೆ ಎನ್ನಲಾಗಿದೆ. ಯೋಧರು ಅಕ್ಷರಶಃ ಹೋಟೆಲ್​ ಅನ್ನು ಸುತ್ತುವರಿದ್ದಿದ್ದರು. ನಂಬರ್​ ಮರೆಮಾಚಿದ ಮೊಬೈಲ್​ಫೋನ್​ನಿಂದ ಕರೆ ಮಾಡಿ, ಅತಿಥಿಗಳನ್ನು ಹೊರಕರೆದು ಅವಮಾನಿಸಿದ್ದಾಗಿ ಭಾರತದ ರಾಯಭಾರ ಕಚೇರಿ ಅಧಿಕಾರಿಗಳು ಆರೋಪಿಸಿದ್ದಾರೆ.
SCROLL FOR NEXT