ವಿದೇಶ

ವಿಶ್ವಸಂಸ್ಥೆಯಲ್ಲಿ ಪ್ಯಾಲೆಸ್ತೇನ್ ವಿರುದ್ಧ ಮತ, ಆಪ್ತಮಿತ್ರ ಇಸ್ರೇಲ್ ಜೊತೆ ನಿಂತ ಭಾರತ!

Srinivas Rao BV
ವಿಶ್ವಸಂಸ್ಥೆ: ಇದೇ ಮೊದಲ ಬಾರಿಗೆ ಭಾರತ ತನ್ನ ವಿದೇಶಾಂಗ ನೀತಿಯಲ್ಲಿ ಅಪರೂಪದ ನಿರ್ಧಾರ ಕೈಗೊಂಡಿದ್ದು ವಿಶ್ವಸಂಸ್ಥೆಯಲ್ಲಿ ಆಪ್ತ ಮಿತ್ರ ಇಸ್ರೇಲ್ ಜೊತೆ ನಿಂತಿದೆ. 
ಪ್ಯಾಲೆಸ್ತೇನ್ ನ ಸರ್ಕಾರೇತರ ಸಂಸ್ಥೆಗೆ ಸಲಹಾ ಸಮಿತಿ ಸ್ಥಾನಮಾನ (consultative status) ನೀಡುವುದನ್ನು ಆಕ್ಷೇಪಿಸಿ ಇಸ್ರೇಲ್ ವಿಶ್ವಸಂಸ್ಥೆಯ ಆರ್ಥಿಕ ಹಾಗೂ ಸಾಮಾಜಿಕ ಪರಿಷತ್ (ಇಸಿಒಎಸ್ಒಸಿ) ಯಲ್ಲಿ ನಿರ್ಣಯ ಮಂಡಿಸಿತ್ತು. ಇಸ್ರೇಲ್ ನ ಈ ನಿರ್ಣಯದ ಪರವಾಗಿ ಭಾರತ ಮತ ಚಲಾವಣೆ ಮಾಡಿದ್ದು ಇಸ್ರೇಲ್ ಜೊತೆ ನಿಂತಿದೆ. 
ಪ್ಯಾಲೆಸ್ತೇನ್ ನ ಸರ್ಕಾರೇತರ ಸಂಸ್ಥೆ ಹಮಾಸ್ ಜೊತೆಗೆ ತನ್ನ ಸಂಬಂಧವನ್ನು ಸ್ಪಷ್ಟವಾಗಿ ತಿಳಿಸಿಲ್ಲ ಈ ಹಿನ್ನೆಲೆಯಲ್ಲಿ ಆ ಸಂಸ್ಥೆಗೆ ಸಲಹಾ ಸಮಿತಿ ಸ್ಥಾನಮಾನ ನೀಡಬಾರದೆಂದು ಇಸ್ರೇಲ್ ವಾದಿಸಿತ್ತು. 
ವಿಶ್ವಸಂಸ್ಥೆಯ ಆರ್ಥಿಕ ಹಾಗೂ ಸಮಾಜಿಕ ಪರಿಷತ್ (ಇಸಿಒಎಸ್ಒಸಿ) ನಲ್ಲಿ ಸಲಹಾ ಸಮಿತಿ ಸ್ಥಾನ ಮಾನ ಪಡೆಯುವುದಕ್ಕೆ ಪ್ಯಾಲೆಸ್ತೇನ್ ಅಸೋಸಿಯೇಷನ್ ಫಾರ್ ಹ್ಯೂಮನ್ ರೈಟ್ಸ್ ಸಂಸ್ಥೆ ಯತ್ನಿಸಿತ್ತು. 
ಇಸ್ರೇಲ್ ನ ನಿರ್ಣಯದ  ಪರವಾಗಿ ಭಾರತವೂ ಸೇರಿದಂತೆ 28 ರಾಷ್ಟ್ರಗಳು ಮತಚಲಾವಣೆ ಮಾಡಿದ್ದರೆ 15 ಮತಗಳು ವಿರುದ್ಧವಾಗಿ ಚಲಾವಣೆಯಾಗಿತ್ತು. 
ಬ್ರೆಜಿಲ್, ಕೆನಡಾ, ಕೊಲಂಬಿಯಾ, ಫ್ರಾನ್ಸ್, ಜರ್ಮನಿ, ಭಾರತ, ಐರ್ಲೇಂಡ್, ಜಪಾನ್, ಕೊರಿಯಾ, ಉಕ್ರೇನ್, ಯುಕೆ, ಯುಎಸ್ ಇಸ್ರೇಲ್ ಪರವಾಗಿ ಮತಚಲಾವಣೆ ಮಾಡಿರುವ ರಾಷ್ಟ್ರಗಳಾಗಿವೆ. ಭಾರತ ವಿಶ್ವಸಂಸ್ಥೆಯಲ್ಲಿ ತನ್ನ ಪರ ನಿಂತಿದ್ದಕ್ಕಾಗಿ  ಇಸ್ರೇಲ್ ಭಾರತಕ್ಕೆ ಧನ್ಯವಾದ ತಿಳಿಸಿದೆ. 
ಭಯೋತ್ಪಾದಕ ಸಂಘಟನೆ ಶಾಹಿದ್ ವಿಶ್ವಸಂಸ್ಥೆಯಲ್ಲಿ ವೀಕ್ಷಕ ಸ್ಥಾನಮಾನ ಪಡೆಯುವುದಕ್ಕೆ ಮಾಡಿದ್ದ ಮನವಿಯನ್ನು ತಿರಸ್ಕರಿಸಲು  ವಿಶ್ವಸಂಸ್ಥೆಯಲ್ಲಿ ನಮ್ಮ ಪರವಾಗಿ ನಿಂತ ಭಾರತಕ್ಕೆ ಧನ್ಯವಾದಗಳು. ಭಯೋತ್ಪಾದಕ ಸಂಘಟನೆಗಳ ವಿರುದ್ಧವಾಗಿ ಒಟ್ಟಾಗಿ ಹೋರಾಡೋಣ ಎಂದು ಭಾರತದಲ್ಲಿರುವ ಇಸ್ರೇಲ್ ನ ಡೆಪ್ಯುಟಿ ಚೀಫ್ ಆಫ್ ಮಿಷನ್ ಅಧಿಕಾರಿ ಮಾಯಾ ಕಡೋಶ್ ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ. 
SCROLL FOR NEXT