ವಿದೇಶ

ಜೈಷ್ ಮುಖ್ಯಸ್ಥ ಮಸೂದ್ ಅಝರ್ ಬದುಕಿದ್ದಾನೆ- ಪಾಕ್ ಮಾಧ್ಯಮಗಳ ವರದಿ

Nagaraja AB

ನವದೆಹಲಿ: ಭಾರತದ ಮೋಸ್ಟ್ ವಾಂಟೆಡ್ ಉಗ್ರ ಹಾಗೂ ಜೈಷ್- ಇ- ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಝರ್  ಸತ್ತಿಲ್ಲ, ಬದುಕಿದ್ದಾನೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿಗಳು ಮಾಡಿವೆ.

ಜೆಇಎಂ ಮುಖಂಡ ಮೃತಪಟ್ಟಿದ್ದಾನೆ ಎಂಬುದು ಸುಳ್ಳು ಸುದ್ದಿ ಎಂದು ಜಿಯೋ ಉರ್ದು ನ್ಯೂಸ್ ವರದಿ ಮಾಡಿದೆ. ಜೆಇಎಂ ಸ್ಥಾಪಕ ಮಸೂದ್ ಅಝರ್ ಮೃತಪಟ್ಟಿದ್ದಾನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಊಹಾಪೋಹಗಳು ಹರಿದಾಡುತ್ತಿದ್ದವು.ಆದಾಗ್ಯೂ, ಅಧಿಕೃತವಾದಂತಹ ಮಾಹಿತಿ ತಿಳಿದುಬಂದಿರಲಿಲ್ಲ.

ಮಸೂದ್ ಅಝರ್ ನ ಕುಟುಂಬ ಮೂಲಗಳನ್ನು ಉಲ್ಲೇಖಿಸಿ  ಆತ ಜೀವಂತವಾಗಿದ್ದಾನೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಆದರೆ, ಆತನ ಆರೋಗ್ಯ ಪರಿಸ್ಥಿತಿ ಬಗ್ಗೆ ಯಾವುದೇ  ವಿವರಣೆ ನೀಡಿಲ್ಲ. ಈ ಬಗ್ಗೆ ಪಾಕಿಸ್ತಾನ ಸರ್ಕಾರ ಕೂಡಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಅಝಾರ್ ಸಾವಿನ ಬಗ್ಗೆ ಮಾಧ್ಯಮಗಳ ವರದಿ  ಬಗ್ಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ ಮಾಹಿತಿ ಸಚಿವ ಪಾವದ್ ಚೌದರಿ, ಈ ಸಂದರ್ಭದಲ್ಲಿ ಏನು ನಡೆಯುತ್ತಿದೆ ಎಂಬುದು ನನ್ನಗೆ ಗೊತ್ತಿಲ್ಲ ಎಂದಿದ್ದಾರೆ.

 2000ದಲ್ಲಿ ಜೈಷ್ - ಇ- ಮೊಹಮ್ಮದ್ ಸಂಘಟನೆ ಸ್ಥಾಪಿಸಿದ ಮಸೂದ್ ಅಝರ್, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿನ ಬಾಹಾವಾಲ್ ಪುರದಲ್ಲಿ ಮನೆ ಹೊಂದಿದ್ದಾನೆ ಎಂಬುದು ತಿಳಿದುಬಂದಿದೆ.

2001ರ ಸಂಸತ್ ದಾಳಿ, ಜಮ್ಮು-ಕಾಶ್ಮೀರ  ಆಸೆಂಬ್ಲಿ ಮೇಲೆ ಆತ್ಮಾಹುತಿ ಬಾಂಬ್ ದಾಳಿ, ಪಾಠಣ್ ಕೋಟ್  ವಾಯುನೆಲೆ ಹಾಗೂ ಇತ್ತೀಚಿಗೆ ಪುಲ್ವಾಮಾ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಆಗಿರುವ ಮಸೂದ್ ಅಝಾರ್ ನನ್ನು 1999ರಲ್ಲಿ ಎನ್ ಡಿಎ ಸರ್ಕಾರ ಆಡಳಿತದಲ್ಲಿ ಭಾರತದಿಂದ ಬಿಡುಗಡೆ ಮಾಡಲಾಗಿತ್ತು.

SCROLL FOR NEXT