ವಾಷಿಂಗ್ಟನ್: ಭಾರತದ ವಿರುದ್ಧ ಪರೋಕ್ಷ ವ್ಯಾಪಾರ ಸಮರ ಸಾರಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇನ್ನು ಮುಂದೆ ಆದ್ಯತೆಯ ಮೇರೆಯ ವಹಿವಾಟನ್ನು ಮರು ಪರಿಶೀಲನೆ ನಡೆಸುವುದಾಗಿ ಘೋಷಣೆ ಮಾಡಿದ್ದಾರೆ.
ವೈಟ್ ಹೌಸ್ ನಲ್ಲಿ ಅಮೆರಿಕ ಕಾಂಗ್ರೆಸ್ ಸಭೆಯಲ್ಲಿ ಪತ್ರ ಮುಖೇನ ಮಾತನಾಡಿರುವ ಟ್ರಂಪ್, ಕಡಿಮೆ ತೆರಿಗೆ ಮತ್ತು ಅಮೆರಿಕ ಮಾರುಕಟ್ಟೆ ಸ್ನೇಹಿ ಪರಿಸರ ಸೃಷ್ಟಿ ಮಾಡಿಕೊಡುವುದಾಗಿ ಭರವಸೆ ನೀಡಿದ್ದ ಭಾರತ ಇದೀಗ ತಮ್ಮ ಮಾತು ತಪ್ಪುತ್ತಿದೆ ಎಂದು ಹೇಳಿದರು. ಇದೇ ವೇಳೆ ಅಮೆರಿಕದಿಂದ ಸಾಕಷ್ಟು ದೇಶಗಳು ಲಾಭ ಮಾಡಿಕೊಳ್ಳುತ್ತಿವೆಯಾದರೂ, ಅದೇ ಮಟ್ಟದ ಪರಿಸರವನ್ನು ಅಮೆರಿಕನ್ ಉದ್ಯಮಿಗಳಿಗೆ ನಿರ್ಮಾಣ ಮಾಡಿಕೊಡುತ್ತಿಲ್ಲ. ಈ ವಿಚಾರದಲ್ಲಿ ಭಾರತ ಮತ್ತು ಟರ್ಕಿ ದೇಶಗಳೂ ಪ್ರಮುಖವಾಗಿವೆ ಎಂದು ಟ್ರಂಪ್ ಹೇಳಿದರು.
ತಮ್ಮ ಮತ್ತೊಂದು ಪತ್ರದಲ್ಲಿ ಭಾರತ ಅಮೆರಿಕಕ್ಕೆ ನೀಡಿರುವ ಭರವಸೆ ಈಡೇರಿಸಿಲ್ಲ. ಸಾಕಷ್ಟು ಕ್ಷೇತ್ರಗಳಲ್ಲಿ ಅಮೆರಿಕನ್ ಉದ್ಯಮಗಳಿಗೆ ಮಾರುಕಟ್ಟೆ ಸ್ನೇಹಿ ಪರಿಸರ ನಿರ್ಮಾಣ ಮಾಡುವಲ್ಲಿ ವಿಫಲವಾಗಿದೆ. ಅಮೆರಿಕದಿಂದ ಪೂರಕ ವಾಣಿಜ್ಯ ವಹಿವಾಟ ಬಯಸುವ ರಾಷ್ಟ್ರಗಳು ಅಮೆರಿಕ ಕಾಂಗ್ರೆಸ್ ಗೆ ನೀಡಿದ್ದ ಭರವಸೆಯಂತೆ ತೆರಿಗೆ ರಹಿತ, ವಿನಾಯಿತಿ ಮತ್ತು ಕೆಲ ಕ್ಷೇತ್ರಗಳಲ್ಲಿ ತೆರಿಗೆ ರಿಯಾಯಿತಿ ನೀಡಬೇಕಿತ್ತು. ಆದರೆ ಭಾರತ ಮತ್ತು ಟರ್ಕಿ ವಿಚಾರದಲ್ಲಿ ಇದು ಸಾಧ್ಯವಾಗಿಲ್ಲ. ಅಮೆರಿಕ ಕಾಂಗ್ರೆಸ್ ಮಾನದಂಡಗಳನ್ನು ತಲುಪಲು ಈ ದೇಶಗಳು ವಿಫಲವಾಗಿವೆ. ಹೀಗಾಗಿ ಈ ದೇಶಗಳ ನಡುವೆ ಅಮೆರಿಕ ಆದ್ಯತೆ ಮೇರೆಯ ವಹಿವಾಟ ಅನ್ನು ಮರು ಪರಿಶೀಲನೆ ನಡೆಸಲು ಗಂಭೀರ ಚಿಂತನೆಯಲ್ಲಿ ತೊಡಗಿದೆ ಎಂದು ಟ್ರಂಪ್ ಹೇಳಿದ್ದಾರೆ.
'ಪ್ರಸ್ತುತ ಈ ಒಪ್ಪಂದದಡಿ 560 ಕೋಟಿ ಡಾಲರ್ ಮೌಲ್ಯದ ಭಾರತದ ಸರಕುಗಳು ಅಮೆರಿಕಕ್ಕೆ ಸುಂಕರಹಿತವಾಗಿ ರಫ್ತಾಗುತ್ತಿವೆ. ಅಮೆರಿಕ ಮತ್ತು ಭಾರತ ಸರಕಾರದ ನಡುವೆ ಸಾಕಷ್ಟು ಚರ್ಚೆ ನಡೆದ ಬಳಿಕವೇ ಈ ಬಗ್ಗೆ ಚಿಂತನೆ ನಡೆಸಿದ್ದೇನೆ. ಅಮೆರಿಕದ ಉತ್ಪನ್ನಗಳಿಗೆ ಭಾರತ ತನ್ನ ಮಾರುಕಟ್ಟೆಯಲ್ಲಿ ಸಮಾನ ಹಾಗೂ ಸುಗಮ ಪ್ರವೇಶ ಒದಗಿಸುತ್ತಿಲ್ಲ' ಎಂದು ಟ್ರಂಪ್ ಅಮೆರಿಕನ್ ಕಾಂಗ್ರೆಸ್ ಮುಖಂಡರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಆದ್ಯತೆಗಳ ಸಾಮಾನ್ಯೀಕೃತ ವ್ಯವಸ್ಥೆ (ಜನರಲೈಸ್ಡ್ ಸಿಸ್ಟಂ ಆಫ್ ಬೆನಿಫಿಶಿಯರೀಸ್- ಜಿಎಸ್ಪಿ) ಯಿಂದ ಭಾರತವನ್ನು ತೆಗೆದು ಹಾಕಲಾಗುವುದು ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿಗಳ ಕಚೇರಿ ತಿಳಿಸಿದೆ. ಈ ಕುರಿತು ಅಧಿಸೂಚನೆ ಪ್ರಕಟಿಸಿದ ೬೦ ದಿನಗಳ ವರೆಗೆ ಈಗಿರುವ ವ್ಯವಸ್ಥೆಯೇ ಮುಂದುವರಿಯುತ್ತದೆ. ಬಳಿಕ ಅಧ್ಯಕ್ಷರ ಆದೇಶದ ಮೂಲಕ (ಸುಗ್ರೀವಾಜ್ಞೆ) ಇದನ್ನು ಜಾರಿಗೊಳಿಸಲಾಗುವುದು ಎಂದು ಇಲಾಖೆ ತಿಳಿಸಿದೆ.
ಭಾರತದ ಜತೆಗಿನ ವ್ಯಾಪಾರದಲ್ಲಿ 2017ರಲ್ಲಿ ಅಮೆರಿಕದ ವ್ಯಾಪಾರ ಕೊರತೆ 27.3 ಶತಕೋಟಿ ಡಾಲರ್ಗಳಷ್ಟಿತ್ತು ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿಗಳ ಕಚೇರಿ ಹೇಳಿದೆ. ಅಮೆರಿಕ ಜತೆಗಿನ ವ್ಯಾಪಾರದಲ್ಲಿ ಭಾರತವೇ ಜಗತ್ತಿನ ಅತಿದೊಡ್ಡ ಜಿಎಸ್ಪಿ ಫಲಾನುಭವಿ ರಾಷ್ಟ್ರವಾಗಿದೆ. ಭಾರತದ ವಿರುದ್ಧ ದಂಡನಾ ಕ್ರಮವಾಗಿ ಟ್ರಂಪ್ ಆಡಳಿತ ಈ ನಿರ್ಣಯಕ್ಕೆ ಮುಂದಾಗಿದೆ. ಭಾರತ ನೂತನ ಇ-ಕಾಮರ್ಸ್ ನಿಯಮಗಳನ್ನು ಜಾರಿಗೊಳಿಸಿದ ಬಳಿಕ ಅಮೆರಿಕದ ಅಮೆಜಾನ್.ಕಾಮ್ ಮತ್ತು ಫ್ಲಿಪ್ಕಾರ್ಟ್ ಮಾಲೀಕತ್ವ ಹೊಂದಿರುವ ವಾಲ್ ಮಾರ್ಟ್ಗಳ ವಹಿವಾಟಿಗೆ ಭಾರೀ ಹೊಡೆತ ಬಿದ್ದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics