ವಿದೇಶ

ನಾನು ಬದುಕಿದ್ದೇನೆ, ಚೆನ್ನಾಗಿದ್ದೇನೆ: ಭಾರತದ ವಿರುದ್ಧ ಜಿಹಾದ್ ಆರಂಭಿಸಲು ಮಸೂದ್ ಅಜರ್ ಕರೆ

Shilpa D
ಇಸ್ಲಮಾಬಾದ್: ನಾನು ಇನ್ನೂ ಬದುಕಿದ್ದೇನೆ, ಚೆನ್ನಾಗಿಯೇ ಇದ್ದೇನೆ, ಕಾಶ್ಮೀರಿಗಳನ್ನು ಭಾರತದವರು ದಮನ ಮಾಡುತ್ತಿದ್ದಾರೆ ಹೀಗಾಗಿ ಭಾರತೀಯರ ವಿರುದ್ಧ ಜಿಹಾದ್‌ ಆರಂಭಿಸಬೇಕೆಂದು  ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆ ಮಸೂದ್ ಅಜರ್ ತನ್ನ ಹಿಂಬಾಲಕರಿಗೆ ಕರೆ ನೀಡಿದ್ದಾನೆ.
ರಾಷ್ಟ್ರೀಯ ಕ್ರಿಯಾ ಯೋಜನೆಯಡಿ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಮುಂದಾಗಿರುವ ಪಾಕಿಸ್ತಾನ ಸರ್ಕಾರದ ವಿರುದ್ದ ಮಸೂದ್‌ ಅಜರ್ ಕಿಡಿಕಾರಿದ್ದಾನೆ. 
ಭಾರತದ ಒತ್ತಾಯದ ಮೇರೆಗೆ ಕ್ರಮ ಕೈಗೊಳ್ಳುತ್ತಿರುವುದನ್ನು ವಿರೋಧಿಸಿದ ಜೈಷ್ ಎ ಮೊಹಮ್ಮದ್‌ ಮುಖ್ಯಸ್ಥ ಮಸೂದ್‌ ಅಜರ್, ಮಸೀದಿಗಳು ಹಾಗೂ ನಿಜವಾದ ಮುಸ್ಲಿಮರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕೆಂದು ಎಚ್ಚರಿಕೆ ನೀಡಿದ್ದಾನೆ. 
11:41 ನಿಮಿಷಗಳ ಆಡಿಯೋ ಕ್ಲಿಪ್‌ನಲ್ಲಿ ಮಾತನಾಡಿರುವ ಮಸೂದ್‌ ಅಜರ್‌ ಭಾರತ, ಪುಲ್ವಾಮಾ ದಾಳಿ ಹಾಗೂ ಪಾಕ್‌ನಲ್ಲಿರುವ ಪ್ರಗತಿಪರರ ಬಗ್ಗೆಯೂ ಮಾತನಾಡಿದ್ದಾನೆ. ಮಾಧ್ಯಮಗಳಲ್ಲಿ ಹರಡುತ್ತಿರುವ ತನ್ನ ಸಾವಿನ ಕುರಿತು ಸುಳ್ಳು ಸುದ್ದಿ ಹರಡುತ್ತಿರುವುದರ ಬಗ್ಗೆಯೇ ಮೊದಲು ಮಾತನಾಡಿರುವ ಭಾರತಕ್ಕೆ ಬೇಕಾಗಿರುವ ಉಗ್ರ ಮಸೂದ್ ಅಜರ್ ತಾನು ಬದಕಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಮಲಾಲಾ ರೀತಿಯ ಪ್ರಗತಿಪರರ ಬಗ್ಗೆಯೂ ಮಾತನಾಡಿದ ಅಜರ್, ಪಾಕಿಸ್ತಾನ ಇಸ್ಲಾಮಿಕ್‌ ರಾಷ್ಟ್ರವಾದ್ದರಿಂದ ಅಂತಹವರಿಗೆ ದೇಶವನ್ನು ಸ್ವಾಧೀನಪಡಿಸಿಕೊಳ್ಳಲು ಅವಕಾಶ ಮಾಡಿಕೊಡಬಾರದೆಂದು ಆಡಿಯೋ ಕ್ಲಿಪ್‌ನಲ್ಲಿ ಹೇಳಿದ್ದಾನೆ. 
ಪಾಕ್ ವಿದೇಶಾಂಗ ಸಚಿವ ಶಾಹ್ ಮಹ್ಮೂದ್‌ ಖುರೇಷಿಯನ್ನು ತರಾಟೆಗೆ ತೆಗೆದುಕೊಂಡ ಜೈಷ್‌ ಎ ಮೊಹಮ್ಮದ್‌ ಮುಖ್ಯಸ್ಥ ಉಗ್ರ ಮಸೂದ್ ಅಜರ್, ಅವರು ಒತ್ತಡದಲ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾನೆ.
SCROLL FOR NEXT