ವಿದೇಶ

ರವೀನಾ, ರೀನಾ ಆಯ್ತು ಈಗ ಪಾಕ್ ನಲ್ಲಿ ಮತ್ತೋರ್ವ ಹಿಂದೂ ಬಾಲಕಿಯ ಅಪಹರಣ, ಮತಾಂತರ ಶಂಕೆ

Srinivasamurthy VN
ಕರಾಚಿ: ಪಾಕಿಸ್ತಾನದಲ್ಲಿ ಮತ್ತೋರ್ವ ಹಿಂದೂ ಬಾಲಕಿಯನ್ನು ಅಪಹರಣ ಮಾಡಲಾಗಿದ್ದು, ಬಲವಂತದ ಮತಾಂತರ ಮಾಡಿರುವ ಶಂಕೆ ಮೂಡಿದೆ.
ಹೌದು.. ಇತ್ತೀಚೆಗಷ್ಟೇ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಇಬ್ಬರು ಹಿಂದೂ ಬಾಲಕಿಯರ ಅಪಹರಣ ಮಾಡಿ ಬಲವಂತವಾಗಿ ಮತಾಂತರಗೊಳಿಸಿ ಮದುವೆ ಮಾಡಿಸಿದ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಈಗ ಅದೇ ಸಿಂಧ್ ಪ್ರಾಂತ್ಯದಲ್ಲಿ ಅಂತಹುದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು ಓರ್ವ ಹಿಂದೂ ಬಾಲಕಿಯನ್ನು ಅಪಹರಿಸಲಾಗಿದ್ದು, ಬಲವಂತದ ಮತಾಂತರ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ.
ಮೂಲಗಳ ಪ್ರಕಾರ ಸಿಂಧ್ ಪ್ರಾಂತ್ಯದ ಬದಿನ್ ಜಿಲ್ಲೆಯ ಟಾಂಗೋ ಬಾಘೋ ಪ್ರದೇಶದ ಮೇಘವಾರ್ ಹಿಂದೂ ಸಮುದಾಯಕ್ಕೆ ಸೇರಿದ 16 ವರ್ಷದ ಅಪ್ರಾಪ್ತ ಹಿಂದೂ ಬಾಲಕಿಯನ್ನು ಅಪಹರಿಸಲಾದ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ, ಯಾವಾಗ ಕಿಡ್ನಾಪ್ ಆಗಿದೆ ಎಂಬುದು ಗೊತ್ತಾಗಿಲ್ಲ.
ಅಪಹೃತ ಬಾಲಕಿಯ ತಂದೆಯು ಬದಿನ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಸರ್ದಾರ್ ಹಸನ್ ನಿಯಾಜಿ ಅವರ ಬಳಿ ಹೋಗಿ ದೂರು ದಾಖಲಿಸಿದ್ದಾರೆ. ಸಿಂಧ್ ಪ್ರಾಂತ್ಯದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಹರಿರಾಮ್ ಕಿಶೋರಿ ಲಾಲ್ ಅವರು ಈ ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ಎಫ್ಐಆರ್ ದಾಖಲಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಸಿಂಧ್​ನಲ್ಲಿ ಅಪ್ರಾಪ್ತ ಮಹಿಳೆಯರ ಮದುವೆ ನಿಷಿದ್ಧವಾಗಿದ್ದು, ಅದನ್ನು ಮೀರಿ ವಿವಾಹವಾದರೆ ಅಪರಾಧವಾಗುತ್ತದೆ ಎಂದು ಲಾಲ್ ಎಚ್ಚರಿಕೆ ನೀಡಿದ್ದಾರೆ. ಸದ್ಯಕ್ಕೆ ಆ ಬಾಲಕಿಯ ಕುಟುಂಬಕ್ಕೆ ರಕ್ಷಣೆ ಕೊಡುವಂತೆ ಪೊಲೀಸರಿಗೆ ಅವರು ಸೂಚಿಸಿದ್ದು, ಇದೇ ವೇಳೆ, ಬಾಲಕಿಯನ್ನು ಹುಡುಕಿ ರಕ್ಷಿಸುವ ಪ್ರಯತ್ನ ನಡೆಯುತ್ತಿದೆ.
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಅದರಲ್ಲೂ ಹಿಂದೂ ಸಮುದಾಯದ ಮಹಿಳೆಯರನ್ನು ಅಪಹರಣ ಮಾಡಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ ಆನಂತರ ವಿವಾಹ ನಡೆಸುವ ಕೃತ್ಯಗಳು ನಿರಂತರವಾಗಿ ನಡೆಯುತ್ತಲೇ ಇದೆ. ಪಾಕಿಸ್ತಾನದಲ್ಲಿ ಒಟ್ಟು ಸುಮಾರು 75 ಲಕ್ಷ ಹಿಂದೂಗಳಿದ್ದು, ಅವರಲ್ಲಿ ಬಹುತೇಕರು ಸಿಂಧ್ ಪ್ರಾಂತ್ಯದಲ್ಲೇ ನೆಲೆಸಿದ್ದಾರೆ. ಇಲ್ಲಿಯೇ ಹೆಚ್ಚಾಗಿ ಇಂಥಹ ಅಪಹರಣ ಘಟನೆಗಳು ನಡೆಯುತ್ತವೆ. ಒಂದು ಅಂದಾಜಿನ ಪ್ರಕಾರ ಸಿಂಧ್ ಪ್ರಾಂತ್ಯದ ಉಮರ್ ಕೋಟ್ ಜಿಲ್ಲೆಯೊಂದರಲ್ಲೇ ಇಂತಹ 25 ಬಲವಂತದ ವಿವಾಹಗಳು ಜರುಗಿವೆ ಎಂದು ಹೇಳಲಾಗಿದೆ.
ಮೊನ್ನೆಮೊನ್ನೆಯ ಹೋಳಿ ಹಬ್ಬದ ದಿನದಂದು ರವೀನಾ(13) ಮತ್ತು ರೀನಾ(15) ಎಂಬ ಇಬ್ಬರು ಬಾಲಕಿಯರನ್ನು ದುಷ್ಕರ್ಮಿಗಳು ಅಪಹರಣ ಮಾಡಿದ್ದರು. ಅದಾದ ನಂತರ ಇವರಿಬ್ಬರಿಗೆ ಇಸ್ಲಾಂ ಧರ್ಮದ ಪ್ರಕಾರ ವಿವಾಹ ಮಾಡಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಕೂಡಲೇ ಮಧ್ಯಪ್ರವೇಶಿಸಿ ಹುಡುಗಿಯರ ರಕ್ಷಣೆಗೆ ಆದೇಶಿಸಿದರು. ಭಾರತ ಸರ್ಕಾರದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಭಾರತೀಯ ರಾಯಭಾರಿ ಮೂಲಕ ಹೆಚ್ಚಿನ ವಿವರ ಕಲೆಹಾಕುತ್ತಿದ್ದಾರೆ.
SCROLL FOR NEXT