ವಿದೇಶ

ಶ್ರೀಲಂಕಾ ದಾಳಿ ನಡೆಸಿದ ಉಗ್ರರಿಗೆ ಬೆಂಗಳೂರು ನಂಟು: ಶ್ರೀಲಂಕಾ ಸೇನೆ

Srinivasamurthy VN
ಕೊಲಂಬೋ: 253 ಮಂದಿಯ ಸಾವಿಗೆ ಕಾರಣವಾಗಿದ್ದ ಈಸ್ಟರ್ ಸಂಡೇ ಸರಣಿ ಆತ್ಮಹತ್ಯಾ ಬಾಂಬ್ ದಾಳಿಗೂ ಸಿಲಿಕಾನ್ ಸಿಟಿ ಬೆಂಗಳೂರಿಗೂ ನಂಟಿದೆ ಎಂದು ಶ್ರೀಲಂಕಾ ಸೇನಾ ಮುಖ್ಯಸ್ಥರು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಶ್ರೀಲಂಕಾ ಸೇನಾ ಮುಖ್ಯಸ್ಥ ಲೆ.ಜನರಲ್ ಮಹೇಶ್ ಸೇನಾನಾಯಕೆ ಅವರು, ಏಪ್ರಿಲ್ 21ರಂದು ರಾಜಧಾನಿ ಕೊಲಂಬೋದ 6 ಕಡೆ ನಡೆದಿದ್ದ ಭೀಕರ ಉಗ್ರ ದಾಳಿಯಲ್ಲಿ 253 ಮಂದಿ ಸಾವನ್ನಪ್ಪಿದ್ದರು. ಆದರೆ ಈ ದಾಳಿಗೂ ಮುನ್ನು ದಾಳಿ ನಡೆಸಿದ್ದ ಉಗ್ರರು ಭಾರತಕ್ಕೆ ಪ್ರಯಾಣಿಸಿ ಅಲ್ಲಿ ಉಗ್ರ ತರಬೇತಿ ಪಡೆದಿದ್ದರು ಎಂಬ ಮಾಹಿತಿ ನಮಗೆ ಲಭ್ಯವಾಗಿದೆ ಎಂದು ಹೇಳಿದ್ದಾರೆ.
ಬಿಬಿಸಿ ಸುದ್ದಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಅವರು, ಉಗ್ರ ದಾಳಿಯ ಕುರಿತು ತನಿಖೆ ನಡೆಸಿರುವ ಅಧಿಕಾರಿಗಳು ಸಾಕಷ್ಟು ಮಾಹಿತಿ ನೀಡಿದ್ದಾರೆ. ಈ ಪೈಕಿ ಉಗ್ರರು ದಾಳಿಗೂ ಮುನ್ನ ಭಾರತದ ಕೆಲ ನಗರಗಳಿಗೆ ಭೇಟಿ ನೀಡಿದ್ದ ವಿಚಾರ ತಿಳಿದುಬಂದಿದೆ. ಈ ಪೈಕಿ ಉಗ್ರರು ತರಬೇತಿಗಾಗಿ ಬೆಂಗಳೂರು, ಕೇರಳ ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದ ವಿಚಾರ ಕೂಡ ಬಯಲಾಗಿದೆ ಎಂದು ಹೇಳಿದ್ದಾರೆ.
2017ರಲ್ಲೇ ಶ್ರೀಲಂಕಾ ಮೂಲದ ಇಬ್ಬರು ಆತ್ಮಹತ್ಯಾ ದಾಳಿಕೋರರು ಭಾರತಕ್ಕೆ ತೆರಳಿದ್ದರು. ಈ ಪೈಕಿ ಉಗ್ರ ಮತ್ತು ಧಾರ್ಮಿಕ ಪ್ರಚಾರಕ ಮೌಲ್ವಿ ಝಹ್ರಾನ್ ಬಿನ್ ಆಶೀಂ ಕೂಡ ಓರ್ವನಾಗಿದ್ದ ಎಂದು ಹೇಳಿದ್ದಾರೆ. ಈತನೇ ಶ್ರೀಲಂಕಾ ಮೂಲದ ಉಗ್ರ ಸಂಘಟನೆ ನ್ಯಾಷನಲ್ ತೌವೀದ್ ಮತ್ತು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ನಡುವಿನ ಕೊಂಡಿಯಾಗಿದ್ದ ಎಂದು ಸೇನಾನಾಯಕೆ ಹೇಳಿದ್ದಾರೆ.
SCROLL FOR NEXT