ವಿದೇಶ

ಭಾರತದ ವಿರುದ್ಧದ ಅಸ್ತ್ರವಾಗಿ ಪಾಕ್ ಉಗ್ರ ಸಂಘಟನೆಗಳ ಬಳಕೆ: ಅಮೆರಿಕ ಚಿಂತಕರು

Srinivasamurthy VN
ವಾಷಿಂಗ್ಟನ್: ಪಾಕಿಸ್ತಾನ ಭಾರತವನ್ನುತನಗಿರುವ ದೊಡ್ಡ ಬೆದರಿಕೆ ಎಂದು ಭಾವಿಸಿದ್ದು, ಇದೇ ಕಾರಣಕ್ಕೆ ಭಾರತದ ವಿರುದ್ಧದ ಅಸ್ತ್ರವಾಗಿ ಉಗ್ರ ಸಂಘಟನೆಗಳನ್ನು ಬಳಕೆ ಮಾಡುತ್ತಿದೆ ಎಂದು ಅಮೆರಿಕ ಚಿಂತಕರ ಚಾವಡಿ ಹೇಳಿದೆ.
ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅಮೆರಿಕ ಮೂಲದ ಕೇಂದ್ರ ಗುಪ್ತಚರ ವಿಭಾಗದ(ಸಿಐಎ) ಮಾಜಿ ಅಧಿಕಾರಿ ಮೈಕೆಲ್‌ ಮೊರೆಲ್‌ ಅವರು, 'ಪಾಕಿಸ್ತಾನ ಜಗತ್ತಿನ ಅತ್ಯಂತ ಅಪಾಯಕಾರಿ ರಾಷ್ಟ್ರ.. ಭಯೋತ್ಪಾದಕ ಗುಂಪುಗಳನ್ನು ಹುಟ್ಟು ಹಾಕಿರುವ ಪಾಕಿಸ್ತಾನವು ಅವುಗಳನ್ನು ಭಾರತವನ್ನು ಹಣಿಯಲು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ.  ಆದರೆ ಭಾರತದ ವಿರುದ್ಧ ಎತ್ತಿಕಟ್ಟಲೆಂದೇ ಸೃಷ್ಟಿ ಮಾಡಿದ ಉಗ್ರ ಗುಂಪುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಈಗ ಪಾಕಿಸ್ತಾನಕ್ಕೇ ಸಾಧ್ಯವಾಗುತ್ತಿಲ್ಲ. ಇದು ಅವರಿಗೆ ಗೊತ್ತಾಗುತ್ತಲೂ ಇಲ್ಲ. ಕ್ರಮೇಣ ಆ ಗುಂಪುಗಳೇ ಅವರ ಮೇಲೆ ದಾಳಿ ಮಾಡಲು ನಿಲ್ಲಲಿವೆ ಎಂದು ಹೇಳಿದ್ದಾರೆ.
ಅಂತೆಯೇ 'ಪಾಕಿಸ್ತಾನದಲ್ಲಿ ಜನಸಂಖ್ಯಾ ಸ್ಫೋಟವಾಗುತ್ತಿದೆ. ಜನಸಂಖ್ಯೆ ಎಂಬುದು ಅಲ್ಲಿ ಭೀಕರಗೊಳ್ಳುತ್ತಾ ಹೋಗುತ್ತಿದೆ. ಆ ದೇಶದ ಆರ್ಥಿಕತೆ ಕುಸಿಯುತ್ತಾ ಸಾಗಿದೆ. ಹೀಗಾಗಿ ಅಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಶಿಕ್ಷಣ ರಂಗ ಈಗಾಗಲೇ ಕುಸಿದು ಬಿದ್ದಿದೆ. ಹೀಗಾಗಿ ಅಲ್ಲಿನ ಪೋಷಕರು ತಮ್ಮ ಮಕ್ಕಳನ್ನು ಮದರಸಾಗಳಿಗೆ ಕಳುಹಿಸುತ್ತಿರುವುದರಲ್ಲಿ ಯಾವುದೇ ಅಚ್ಚರಿಯೂ ಇಲ್ಲ' ಎಂದು ಮೈಕೆಲ್‌ ಮೊರೆಲ್‌ ಹೇಳಿದ್ದಾರೆ.
ಇನ್ನು ಮೈಕೆಲ್‌ ಮೊರೆಲ್‌ ಈ ಹಿಂದೆ ಅಲ್‌ ಖೈದಾ ಉಗ್ರ ಸಂಘಟನೆ ಮುಖ್ಯಸ್ಥನಾಗಿದ್ದ ಒಸಮಾ ಬಿನ್‌ ಲ್ಯಾಡನ್ ನ್ನು ಪಾಕಿಸ್ತಾನದ ನೆಲದಲ್ಲೇ ಹೊಡೆದುರುಳಿಸಿದ್ದ ಕಾರ್ಯಾಚರಣೆಯಲ್ಲಿ ಪ್ರಧಾನ ಪಾತ್ರ ವಹಿಸಿದ್ದರು.
SCROLL FOR NEXT