ವಿದೇಶ

ಶ್ರೀಲಂಕಾ ಉಗ್ರ ದಾಳಿ ಎಫೆಕ್ಟ್; 200 ಇಸ್ಲಾಮಿಕ್ ಪಾದ್ರಿಗಳೂ ಸೇರಿದಂತೆ 600 ವಿದೇಶಿಗರ ಗಡಿಪಾರು!

Srinivasamurthy VN
ಕೊಲಂಬೊ: ಭೀಕರ ಉಗ್ರ ದಾಳಿ ಬಳಿಕ ಎಚ್ಚೆತ್ತುಕೊಂಡಿರುವ ಶ್ರೀಲಂಕಾ ಸರ್ಕಾರ 200 ಇಸ್ಲಾಮಿಕ್ ಪಾದ್ರಿಗಳೂ ಸೇರಿದಂತೆ ಶ್ರೀಲಂಕಾದಲ್ಲಿ ನೆಲೆಯೂರಿದ್ದ 600ಕ್ಕೂ ಹೆಚ್ಚು ವಿದೇಶಿಗರನ್ನು ಗಡಿಪಾರು ಮಾಡಿದೆ.
ಈ ಬಗ್ಗೆ ಶ್ರೀಲಂಕಾದ ಗೃಹ ಸಚಿವ ವಜಿರಾ ಅಬೇಯವರ್ದೆನಾ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, 200 ಇಸ್ಲಾಮಿಕ್ ಪಾದ್ರಿಗಳೂ ಸೇರಿದಂತೆ ಶ್ರೀಲಂಕಾದಲ್ಲಿ ನೆಲೆಯೂರಿದ್ದ 600ಕ್ಕೂ ಹೆಚ್ಚು ವಿದೇಶಿಗರನ್ನು ಗಡಿಪಾರು ಮಾಡಲಾಗಿದೆ. ದೇಶದಲ್ಲಿನ ಪ್ರಸ್ತುತ ಪರಿಸ್ಥಿತಿಗಳನ್ನು ಅವಲೋಕಿಸಿ ಶ್ರೀಲಂಕಾ ಸರ್ಕಾರ ಮಹತ್ವ ನಿರ್ಣಯಕ್ಕೆ ಬಂದಿದ್ದು, ಅದರಂತೆ ವೀಸಾ ನಿಯಮಾವಳಿಗಳನ್ನು ಪುನರ್ ಪರಿಶೀಲನೆ ಮಾಡಲಾಗುತ್ತಿದೆ. ಆದರೆ ಪ್ರಸ್ತುತ ವೀಸಾ ಅವಧಿ ಮುಗಿದಿದ್ದರೂ ಲಂಕಾದಲ್ಲಿರುವ ವಿದೇಶಿಗರನ್ನು ದೇಶದಿಂದ ಗಡಿಪಾರು ಮಾಡಲಾಗಿದೆ. ಇದರಲ್ಲಿ 200ಕ್ಕೂ ಹೆಚ್ಚು ಇಸ್ಲಾಮಿಕ್ ಪಾದ್ರಿಗಳೂ ಸೇರಿದ್ದಾರೆ ಎಂದು ಹೇಳಿದ್ದಾರೆ.
ಅಂತೆಯೇ 'ಪಾದ್ರಿಗಳು ಕಾನೂನಾತ್ಮಕವಾಗಿಯೇ ದೇಶಕ್ಕೆ ಆಗಮಿಸಿದ್ದರು. ಆದರೆ ವೀಸಾ ಅವಧಿ ಮುಗಿದಿದ್ದರೂ ತಮ್ಮ ದೇಶಕ್ಕೆ ವಾಪಸ್ ಆಗಿರಲಿಲ್ಲ. ಈ ಕುರಿತಂತೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಿದ್ದಾರೆ. ದೇಶದಲ್ಲಿ ನೂರಾರು ಧಾರ್ಮಿಕ ಸಂಸ್ಥೆಗಳಿದ್ದು, ಇಲ್ಲಿಗೆ ದಶಕಗಳಿಂದಲೂ ನೂರಾರು ವಿದೇಶಿ ಪಾದ್ರಿಗಳು ಆಗಮಿಸುತ್ತಿದ್ದರು. ಇಲ್ಲಿನ ಮಕ್ಕಳಿಗೆ ಧಾರ್ಮಿಕತೆಯನ್ನು ಬೋಧಿಸುತ್ತಿದ್ದರು. ಆದರೆ ಇದಕ್ಕೆ ನಮ್ಮ ವಿರೋಧವೇನೂ ಇಲ್ಲ. ಆದರೆ ಈ ಪೈಕಿ ಕೆಲವರು ದೇಶವಿದ್ರೋಶ ಚಟುವಟಿಗಳಲ್ಲಿ ಭಾಗಿಯಾಗಿದ್ದಾರೆ. ಇದರ ಪರಿಣಾಮವೇ ಇತ್ತೀಚಿಗಿನ ಉಗ್ರ ದಾಳಿ. ಈ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆಯಲ್ಲಿ ತೊಡಗಿದೆ ಎಂದು ಹೇಳಿದ್ದಾರೆ.
ಕಳೆದ ಈಸ್ಟರ್ ಸಂಡೆಯಂದು ಶ್ರೀಲಂಕಾದಲ್ಲಿ ನಡೆದಿದ್ದ ಭೀಕರ ಉಗ್ರ ದಾಳಿಯಲ್ಲಿ 253 ಮಂದಿ ಸಾವಿಗೀಡಾಗಿ 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಮೂರು ಚರ್ಚ್ ಗಳು ಹಾಗೂ ಮೂರು ಹೊಟೆಲ್ ಗಳ ಮೇಲೆ ದಾಳಿ ನಡೆಸಿದ್ದ 6ಮಂದಿ ಆತ್ಮಹತ್ಯಾ ದಾಳಿಕೋರರು ತಮ್ಮನ್ನು ತಾವು ಸ್ಫೋಟಿಸಿಕೊಂಡು ಭಾರಿ ವಿಧ್ವಂಸ ನಡೆಸಿದ್ದರು.
SCROLL FOR NEXT