ವಿದೇಶ

ಟ್ರಂಪ್ ಗೆ ಮುಖಭಂಗ; ವೀಸಾ ಉಲ್ಲಂಘನೆ ವಿದ್ಯಾರ್ಥಿಗಳ ಗಡಿಪಾರು ನಿಯಮಕ್ಕೆ ಫೆಡರಲ್ ನ್ಯಾಯಾಧೀಶರ ತಡೆಯಾಜ್ಞೆ!

Sumana Upadhyaya
ನ್ಯೂಯಾರ್ಕ್: ವಿದ್ಯಾರ್ಥಿ ವೀಸಾ ನಿಯಮಕ್ಕೆ ಸಂಬಂಧಪಟ್ಟಂತೆ ಅಮೆರಿಕಾದ ಡೊನಾಲ್ಡ್ ಟ್ರಂಪ್ ಸರ್ಕಾರಕ್ಕೆ ಹಿನ್ನಡೆಯಾಗಿದೆ.
ವೀಸಾ ನಿಬಂಧನೆ ಅನುಸರಣೆಯಲ್ಲಿ ಸಣ್ಣ ತಪ್ಪು ಮಾಡಿದರೂ ಸಹ ವಿದ್ಯಾರ್ಥಿಗಳನ್ನು ಅವರ ದೇಶಕ್ಕೆ ಗಡಿಪಾರು ಮಾಡುವ ಮತ್ತು ವೀಸಾ ನಿಬಂಧನೆಯಲ್ಲಿ ಬದಲಾವಣೆ ಮಾಡಿಕೊಂಡು ಅವರು ಸುಮಾರು 10 ವರ್ಷಗಳವರೆಗೆ ವಾಪಸ್ ಬರುವುದನ್ನು ತಡೆಯುವ ಅಮೆರಿಕ ಸರ್ಕಾರದ ನಿಯಮಕ್ಕೆ ಅಲ್ಲಿನ ಫೆಡರಲ್ ನ್ಯಾಯಾಧೀಶರು ತಡೆಯಾಜ್ಞೆ ತಂದಿದ್ದಾರೆ.
ಕಳೆದ ವರ್ಷ ಆಗಸ್ಟ್ ನಲ್ಲಿ ಅಮೆರಿಕಾ ಸರ್ಕಾರ ಹೊರಡಿಸಿದ್ದ ಯುಎಸ್ ಕಸ್ಟಮ್ಸ್ ಮತ್ತು ವಲಸೆ ಸೇವೆ(ಯುಎಸ್ ಸಿಐಎಸ್) ನೀತಿಗೆ ಫೆಡರಲ್ ನ್ಯಾಯಾಧೀಶೆ ಲೊರೆಟ್ಟ ಸಿ ಬಿಗ್ಸ್ ತಡೆಯಾಜ್ಞೆ ತಂದಿದ್ದಾರೆ. ವಿದ್ಯಾರ್ಥಿ ವೀಸಾದಡಿ 180 ದಿನಗಳು ಕಳೆದ ನಂತರವೂ ಸಹ ಅಮೆರಿಕಾದಲ್ಲಿಯೇ ಉಳಿದ ವಿದ್ಯಾರ್ಥಿಗಳಿಗೆ ದಂಡ ಅಥವಾ ಶಿಕ್ಷೆ ವಿಧಿಸಿ ಅವರ ಸ್ವದೇಶಕ್ಕೆ ಗಡೀಪಾರು ಮಾಡುವ ಕಾನೂನನ್ನು ಜಾರಿಗೆ ತರಲಾಗಿತ್ತು.
ಈ ನಿಯಮವನ್ನು ವಿರೋಧಿಸಿ ಅಲ್ಲಿನ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ತ್ವರಿತವಾಗಿ ನಡೆಸಬೇಕೆಂದು ಕೂಡ ನ್ಯಾಯಾಧೀಶೆ ಆದೇಶ ನೀಡಿದ್ದಾರೆ.
ಈ ಕುರಿತು ಐಎಎನ್ಎಸ್ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ ಅಮೆರಿಕಾದ ವಲಸೆ ತಜ್ಞ ಡೌಗ್ ರಾಂಡ್, ವಿದೇಶಗಳ ವಿದ್ಯಾರ್ಥಿಗಳಿಗೆ ಇದರಿಂದ ಅತ್ಯಂತ ಅನುಕೂಲವಾಗಲಿದೆ. ಅದರಲ್ಲೂ ಈ ವೀಸಾದಡಿ ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಗೆಲುವಾಗಿದೆ. ಕಳೆದ ವರ್ಷ ಯುಎಸ್ ಸಿಐಎಸ್ ಹೊರಡಿಸಿದ ನೀತಿಯನ್ನು ವಜಾಗೊಳಿಸಲಾಗಿದ್ದು, ವಿಚಾರಣೆ ಹಂತದಲ್ಲಿರುವ ಕೇಸಿನ ತೀರ್ಪು ಯಾವ ರೀತಿ ಹೊರಬರಲಿದೆ ಎಂಬುದನ್ನು ಕಾದುನೋಡಬೇಕಿದೆ ಎಂದರು.
ವೀಸಾ ನೀತಿ ಉಲ್ಲಂಘಿಸಿದ ವಿದ್ಯಾರ್ಥಿಗಳನ್ನು ಗಡಿಪಾರು ಮಾಡಿ ನಂತರ ಅವರು ಮೂರರಿಂದ 10 ವರ್ಷಗಳವರೆಗೆ ಅಮೆರಿಕಾಕ್ಕೆ ಬರದಂತೆ ತಡೆಯುವುದು ಕಠಿಣ ಶಿಕ್ಷೆಯಾಗಿದ್ದು ವೀಸಾ ನೀತಿಯನ್ನು ದುರುಪಯೋಗಪಡಿಸಿಕೊಳ್ಳುವ ಕ್ರಮವಾಗಿದೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಅತಂತ್ರ ಸ್ಥಿತಿಗೆ ತಲುಪಲಿದೆ. ಬಹುತೇಕ ವಿದ್ಯಾರ್ಥಿಗಳಿಗೆ ವೀಸಾ ಷರತ್ತುಗಳನ್ನು ಉಲ್ಲಂಘಿಸುವ ಉದ್ದೇಶವಿರುವುದಿಲ್ಲ. ಮುಗ್ಧತೆಯಿಂದ ಆಗುವ ತಪ್ಪುಗಳಿವು ಎಂದು ಡೌಗ್ ರಾಂಡ್ ಹೇಳಿದ್ದಾರೆ.
ಉತ್ತರ ಕ್ಯಾಲಿಫೋರ್ನಿಯಾದ ವಿನ್ಸ್ಟನ್-ಸಲೆಮ್ ಫೆಡರಲ್ ಕೋರ್ಟ್ ನಲ್ಲಿ ಬಿಗ್ಸ್ ಕಳೆದ ಶುಕ್ರವಾರ ಅಮೆರಿಕಾ ಸರ್ಕಾರದ ನೀತಿಗೆ ತಡೆಯಾಜ್ಞೆ ತಂದರು. ಸರ್ಕಾರದ ವಿದ್ಯಾರ್ಥಿ ವೀಸಾ ನೀತಿ ವಿರೋಧಿಸಿ ಚೀನಾದ ಇಬ್ಬರು ವಿದ್ಯಾರ್ಥಿಗಳು. ಅಮೆರಿಕನ್ ಫೆಡರೇಶನ್ ಆಫ್ ಟೀಚರ್ಸ್, ಮೂರು ಕಾಲೇಜುಗಳು ಮತ್ತು ಗುಲ್ಫೋರ್ಡ್ ಕಾಲೇಜ್ ಇಂಟರ್ನಾಷನಲ್ ಕ್ಲಬ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.
SCROLL FOR NEXT