ವಿದೇಶ

ಇಸ್ಲಾಮಿಕ್ ಸ್ಟೇಟ್ ಉಗ್ರರ ಹೆಡೆಮುರಿ ಕಟ್ಟಲು ಭಾರತದ ನೆರವು ಕೋರಿದ ಶ್ರೀಲಂಕಾ!

Srinivasamurthy VN
ಕೊಲಂಬೋ: ಕಳೆದ ಈಸ್ಟರ್ ಸಂಡೇ ದಿನದಂದು ರಾಜಧಾನಿ ಕೊಲಂಬೋದಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣದ ಬೆನ್ನಲ್ಲೇ ಉಗ್ರರ ವಿರುದ್ಧ ತೊಡೆ ತಟ್ಟಿ ನಿಂತಿರುವ ಶ್ರೀಲಂಕಾ, ಇಸ್ಲಾಮಿಕ್ ಸ್ಟೇಟ್ ಉಗ್ರರ ಹೆಡೆಮುರಿ ಕಟ್ಟಲು ಭಾರತದ ನೆರವು ಕೋರಿದೆ.
ಹೌದು.. ಈ ಹಿಂದೆ ಭಾರತದ ಗುಪ್ತಚರ ಇಲಾಖೆಗಳು ನೀಡಿದ್ದ ಸಂಭಾವ್ಯ ಉಗ್ರ ದಾಳಿ ಎಚ್ಚರಿಕೆಯನ್ನು ಕಡೆಗಣಿಸಿ ಇದೀಗ ಅದರ ಫಲ ಅನುಭವಿಸುತ್ತಿರುವ ಶ್ರೀಲಂಕಾ ಇದೀಗ ಇಸ್ಲಾಮಿಕ್ ಸ್ಟೇಟ್ ಉಗ್ರರ ದಮನ ಮಾಡಲು ಭಾರತ ಸರ್ಕಾರದ ನೆರವು ಕೋರಿದೆ. ಈ ಬಗ್ಗೆ ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಲೆಫ್ಟಿನೆಂಟ್ ಜನರಲ್ ಸೇನಾ ನಾಯಕೆ ಅವರು, 'ಉಗ್ರರ ಸಂಚು ವಿಫಲಗೊಳಿಸುವ ಕುರಿತು ಭಾರತ ಸರ್ಕಾರದ ನೆರವು ಕೋರಿದ್ದೇವೆ. 
ಬಾಂಬ್ ನಿಷ್ಕ್ರಿಯಗೊಳಿಸುವ ಸಾಮಗ್ರಿ, ಸೈಬರ್​ ವಾರ್ ಫೇರ್​ ಅಸಿಸ್ಟೆನ್ಸ್​ ಹಾಗೂ ಕೆಲ ತರಬೇತಿ ಮತ್ತು ಸಾಮಗ್ರಿಗಳ ನೆರವು ನೀಡುವಂತೆ ಭಾರತದ ನೆರವು ಕೇಳಿದ್ದೇವೆ ಎಂದು ಹೇಳಿದ್ದಾರೆ.
ಎಲ್ ಟಿಟಿಇ ವಿರುದ್ಧ ಹೋರಾಡಿದ ನಮಗೆ ಮಿಲಿಟರಿ ಸಹಾಯ ಬೇಡ
ಇದೇ ವೇಳೆ ನಮಗೆ ಯಾವುದೇ ದೇಶದ ಮಿಲಿಟರಿ ಸಹಕಾರ ಬೇಡ ಎಂದು ಹೇಳಿದ ಸೇನಾ ನಾಯಕೆ ಅವರು, ನಮಗೆ ಬೇರೆ ದೇಶದ ಸೈನಿಕರ ಅಗತ್ಯತೆ ಇಲ್ಲ. ನಮಗೆ ಮತ್ತು ನಮ್ಮ ಸೇನೆಗೆ ಉಗ್ರರ ವಿರುದ್ಧ ತನಿಖೆಗೆ ಸಹಕಾರ ಬೇಕು. ತಾಂತ್ರಿಕತೆಯ ನೆರವು ಬೇಕು. ಎಲ್​ಟಿಟಿಇ ವಿರುದ್ಧವೇ ನಾವು ಹೋರಾಡಿದ್ದೇವೆ. ಆದ್ರೆ ಮುಂಬರುವ ದಿನಗಳಲ್ಲಿ ಭಯೋತ್ಪಾದನೆಯನ್ನು ನಿರ್ಮೂಲನೆಗೊಳಿಸಲು ನಮ್ಮ ಸಾಮರ್ಥ್ಯ ವೃದ್ಧಿ ಮಾಡಿಕೊಳ್ಳಬೇಕಾಗಿದೆ. ಹೀಗಾಗಿ ನಮಗೆ ಬೇರೆ ದೇಶಗಳಿಂದ ಟೆಕ್ನಿಕಲ್ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ಭಾರತೀಯ ಸೇನೆಯ ಜೊತೆ ನಮ್ಮ ಸಂಬಂಧ ಸದಾ ಹೀಗೆ ಉತ್ತಮವಾಗಿರುತ್ತೆ ಎಂಬ ವಿಶ್ವಾಸವನ್ನು ಮಹೇಶ್ ಸೇನಾನಾಯಕೆ ವ್ಯಕ್ತಪಡಿಸಿದ್ದಾರೆ.
ಕಳೆದ ಈಸ್ಟರ್ ಸಂಡೆಯಂದು ನಡೆದಿದ್ದ ಭೀಕರ ಆತ್ಮಹತ್ಯಾ ಸರಣಿ ಬಾಂಬ್ ಸ್ಫೋಟದಲ್ಲಿ 250ಕ್ಕೂ ಅಧಿಕ ಮಂದಿ ಸಾವನ್ನಪ್ಪಿ 500ಕ್ಕೂ ಅಧಿಕಮಂದಿ ಗಾಯಗೊಂಡಿದ್ದರು.
SCROLL FOR NEXT