ವಿದೇಶ

ನೂತನ ಭಾರತ ಸರ್ಕಾರದ ಜೊತೆಗೆ ಮಾತುಕತೆಗೆ ಸಿದ್ಧ- ಪಾಕಿಸ್ತಾನ

Nagaraja AB

ಮುಲ್ತಾನಾ: ಬಗೆಹರಿಯದ ಅನೇಕ ವಿವಾದಗಳ ಇತ್ಯರ್ಥ ಸಂಬಂಧ ನೂತನ ಭಾರತ ಸರ್ಕಾರದ ಜೊತೆಗೆ ಮಾತುಕತೆಗೆ ಸಿದ್ಧವಿರುವುದಾಗಿ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಹೇಳಿದ್ದಾರೆ.

ಮುಲ್ತಾನಾದಲ್ಲಿ ನಡೆದ ಇಫ್ತಾರ್ ಭೋಜನ ಕೂಟದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉಭಯ ರಾಷ್ಟ್ರಗಳ ವಲಯದಲ್ಲಿ ಶಾಂತಿ, ಪ್ರಗತಿ ನೆಲೆಸುವ ನಿಟ್ಟಿನಲ್ಲಿ ವಿವಾದಗಳನ್ನು ಒಂದೆಡೆ ಕೂತು ಭಾರತ ಹಾಗೂ ಪಾಕಿಸ್ತಾನ ಬಗೆಹರಿಸಿಕೊಳ್ಳಬೇಕಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ  ಬಿಜೆಪಿ ಚುನಾವಣೆಯಲ್ಲಿ ಗೆದ್ದು ಎರಡನೇ ಬಾರಿಗೆ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಮುಂದಾಗುತ್ತಿದ್ದಂತೆ ಪಾಕಿಸ್ತಾನದಿಂದ ಈ ರೀತಿಯ ಹೇಳಿಕೆ ಹೊರಬಿದಿದ್ದೆ.

ಚುನಾವಣೆಯಲ್ಲಿ ಗೆದ್ದ ಬಳಿಕ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ , ಉಭಯ ರಾಷ್ಟ್ರಗಳ ನಡುವೆ ಶಾಂತಿ, ಪ್ರಗತಿಯಾಗಿ ಅವರೊಂದಿಗೆ ಕೆಲಸ ಮಾಡುವುದಾಗಿ ಹೇಳಿಕೆ ನೀಡಿದ್ದರು.

ಚುನಾವಣೆಯಲ್ಲಿ ಮೋದಿ ಗೆದ್ದರೆ ಕಾಶ್ಮೀರ ವಿವಾದ ಸೇರಿದಂತೆ ಭಾರತ ಹಾಗೂ ಪಾಕಿಸ್ತಾನ ನಡುವಣ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಉತ್ತಮ ಅವಕಾಶವಿದೆ ಎಂದು ಏಪ್ರಿಲ್ ತಿಂಗಳಲ್ಲಿಯೇ ಇಮ್ರಾನ್ ಖಾನ್ ಹೇಳಿಕೆ ನೀಡಿದ್ದರು.

ಫಲಿತಾಂಶಕ್ಕೂ ಒಂದು ದಿನ ಮುಂಚಿತವಾಗಿ ಶಾಂಗೈ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್  ಅವರನ್ನು ಭೇಟಿಯಾಗಿದ್ದ  ಪಾಕಿಸ್ತಾನದ ವಿದೇಶಾಂಗ ಸಚಿವ ಖುರೇಷಿ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳುವಂತೆ ಮನವೊಲಿಸಿದ್ದರು.

SCROLL FOR NEXT