ವಿದೇಶ

ಟ್ರಂಪ್ ಜೊತೆಗಿನ ಮಾತುಕತೆ ವಿಫಲ, ರಾಯಭಾರಿಗೆ ಮರಣದಂಡನೆ ವಿಧಿಸಿದ ಸರ್ವಾಧಿಕಾರಿ ಕಿಮ್

Srinivasamurthy VN
ಸಿಯೋಲ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗಿನ ದ್ವಿಪಕ್ಷೀಯ ಮಾತುಕತೆ ಏರ್ಪಡಿಸುವಲ್ಲಿ ವಿಫಲರಾದ ಎಂಬ ಒಂದೇ ಕಾರಣಕ್ಕಾಗಿ ತನ್ನ ರಾಯಭಾರಿಗೆ ಉತ್ತರ ಕೊರಿಯಾ ಸರ್ವಾಧಿಕಾರಿ ಮರಣದಂಡನೆ ವಿಧಿಸಿದ್ದಾನೆ ಎಂದು ಹೇಳಲಾಗಿದೆ.
ಈ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು, ಅಮೆರಿಕದಲ್ಲಿದ್ದ ಉತ್ತರ ಕೊರಿಯಾ ರಾಯಭಾರಿ ಕಿಮ್ ಹೊಯೊಕ್ ಚಾಲ್ ಅವರಿಗೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮರಣದಂಡನೆ ಶಿಕ್ಷೆ ವಿಧಿಸಿದ್ದು, ಉತ್ತರ ಕೊರಿಯಾದ ಶೂಟಿಂಗ್ ತಂಡ ಕಿಮ್ ಹೊಯೊಕ್ ರನ್ನು ಗುಂಡಿಕ್ಕಿ ಕೊಂದು ಹಾಕಿದೆ ಎಂದು ವರದಿ ಮಾಡಿವೆ. ಕಿಮ್ ಹೊಯೊಕ್ ಚಾಲ್ ಮಾತ್ರವಲ್ಲದೇ ಆತನೊಂದಿಗೆ ಇತರೆ ನಾಲ್ಕು ಮಂದಿ ಅಧಿಕಾರಿಗಳನ್ನೂ ಕೂಡ ಕೊಲ್ಲಲಾಗಿದೆ ಎಂದು ಹೇಳಲಾಗಿದೆ.
ಮೂಲಗಳ  ಪ್ರಕಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ರ ಬಹು ನಿರೀಕ್ಷಿತ ಹನೋಯ್ ಶೃಂಗಸಭೆಯ ನೇತೃತ್ವವನ್ನು ಇದೇ ಕಿಮ್ ಹೊಯೊಕ್ ಚಾಲ್ ಅವರು ಹೊತ್ತಿದ್ದರು. ಆದರೆ ಆ ಬಳಿಕ ಈ ಶೃಂಗಸಭೆಯನ್ನು ಯಶಸ್ವಿಗೊಳಿಸಲು ಕಿಮ್ ಹೊಯೊಕ್ ವಿಫಲರಾಗಿದ್ದರು. ಅಣ್ವಸ್ತ್ಪಗಳ ಸಂಬಂಧ ಟ್ರಂಪ್ ಕೂಡ ಕೋಪ ಮಾಡಿಕೊಂಡು ಶೃಂಗಸಭೆಯನ್ನು ರದ್ದು ಮಾಡಿದ್ದರು. ಇದರಿಂದ ಮತ್ತೆ ಅಂತಾರಾಷ್ಟ್ರೀಯವಾಗಿ ಕಿಮ್ ಜಾಂಗ್ ಉನ್ ಸುದ್ದಿಯಾಗಿದ್ದರು.
ಹನೋಯ್ ಶೃಂಗಸಭೆ ರದ್ದುಗೊಳ್ಳಲು ಕಿಮ್ ಹೊಯೊಕ್ ಮತ್ತು ಆತನ ತಂಡವೇ ಕಾರಣ. ಇವರು ಸರ್ವಾಧಿಕಾರಿಯ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಕೋಪಗೊಂಡ ಕಿಮ್ ಐದೂ ಮಂದಿಗೆ ಕಳೆದ ಮಾರ್ಚ್ ನಲ್ಲಿ ಮರಣ ದಂಡನೆ ಶಿಕ್ಷೆ ವಿದಿಸಿದ್ದಾರೆ ಎನ್ನಲಾಗಿದೆ. ಮಿರಿಮ್ ವಿಮಾನ ನಿಲ್ದಾಣದ ಆವರಣದಲ್ಲಿ ಈ ಐದೂ ಅಧಿಕಾರಿಗಳನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಹೇಳಲಾಗಿದೆ. 
ಮಹಿಳಾ ಅಧಿಕಾರಿಯ ಜೈಲಿಗಟ್ಟಿದ ಕಿಮ್
ಇನ್ನು ಅಮೆರಿಕ ವಿಚಾರವಾಗಿ ಗಂಭೀರವಾಗಿರುವ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ಕಳೆದ ಫೆಬ್ರವರಿಯಲ್ಲಿ ಶಿನ್ ಹೈ ಯೊಂಗ್ ಎಂಬ ಮಹಿಳಾ ಅಧಿಕಾರಿಯನ್ನು ಸಂಧಾನಕಾರಣಿಯಾಗಿ ನೇಮಿಸಿದ್ದ. ಆದರೆ ಟ್ರಂಪ್ ಈ ಅಧಿಕಾರಿಯ ಸಂಧಾನದ ಮಾತುಕತೆ ತಿರಸ್ಕರಿಸಿದ್ದು ಮಾತ್ರವಲ್ಲದೇ 'ನೋ ಡೀಲ್' ಮೂಲಕ ಉತ್ತರ ಕೊರಿಯಾ ಜೊತೆಗಿನ ಸಂಬಂಧಕ್ಕೆ ಅಡ್ಡಿಯಾದರು. ಇದೇ ಕಾರಣಕ್ಕೆ ಕರ್ತವ್ಯ ಲೋಪದ ಆರೋಪಡಿಯಲ್ಲಿ ಈ ಮಹಿಳಾ ಅಧಿಕಾರಿಯನ್ನು ಕಿಮ್ ಜೈಲಿಗಟ್ಟಿದ್ದಾನೆ ಎನ್ನಲಾಗಿದೆ.
SCROLL FOR NEXT