ವಿದೇಶ

ಮೋದಿ ಪ್ರಮಾಣವಚನ: ಬಹುಮಹಡಿ ಕಟ್ಟಡದ ಮೇಲೆ ದೀಪಗಳಿಂದ ಮೋದಿ ಚಿತ್ರ ಬಿಡಿಸಿದ ಯುಎಇ

Nagaraja AB

ಅಬುದಾಬಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಪುಟ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಭಾರತ ಹಾಗೂ ಯುಎಇ ನಡುವಿನ ಗಟ್ಟಿ ಬಾಂಧವ್ಯ ಹಾಗೂ ಸಹಕಾರದ ಸಂಕೇತವಾಗಿ ಪ್ರತಿಷ್ಠಿತ ಅಡ್ ನಾಕ್  ಬಹು ಮಹಡಿ ಕಟ್ಟಡದಲ್ಲಿ ವರ್ಣರಂಜಿತ ದೀಪಗಳಿಂದ ಮೋದಿ ಚಿತ್ರವನ್ನು ಯುಎಇ ಸರ್ಕಾರದಿಂದ ಬಿಡಿಸಲಾಗಿತ್ತು.

ಈ ಕಟ್ಟಡದಲ್ಲಿ ಭಾರತ, ಯುಎಇ ಭಾವುಟ ಹಾಗೂ ಪ್ರಧಾನಿ ನರೇಂದ್ರ ಮೋದಿ , ಅಬುದಾಬಿಯ ರಾಜ ಶೇಖ್ ಮೊಹಮ್ಮದ್ ಬಿನ್ ಝಯದ್ ಅಲ್ ನಯ್ಯನ್  ಪರಸ್ಪರ ಕೈ ಹಿಡಿದಿರುವ ಪೋಟೋಗಳನ್ನು ಬಿಡಿಸಲಾಗಿತ್ತು.
ಅಬುದಾಬಿ ರಾಷ್ಟ್ರೀಯ ತೈಲ ಕಂಪನಿ ಅಥವಾ ಅಡ್ ನಾಕ್ ಯುಎಇಯ  ರಾಜ್ಯ ಸ್ವಾಮ್ಯದ  ತೈಲ ಕಂಪನಿಯಾಗಿದೆ. ಈ ಕಂಪನಿ ಮೂಲಕ ಭಾರತದ ಕಾರ್ಯತಂತ್ರ ಪಟ್ರೋಲಿಯಂ ಮೀಸಲು ಕಾರ್ಯಕ್ರಮದಲ್ಲಿ  ಹೂಡಿಕೆ ಮಾಡಿದ್ದು, ಭಾರತದ ಇಂಧನ ಸುರಕ್ಷತೆಗೆ ಯುಎಇ ಮೊದಲ ಆದ್ಯತೆ ನೀಡುತ್ತಿದೆ.
ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ತೈಲೋತ್ಪನ್ನಗಳ ಸಂಕೀರ್ಣದಲ್ಲಿ ಅಡ್ ನಾಕ್ ಹೆಚ್ಚಿನ ಪಾಲುದಾರಿಕೆಯನ್ನು ಹೊಂದಿದೆ ಎಂದು ಕಲೀಜ್ ಟೈಮ್ಸ್ ವರದಿ ಮಾಡಿದೆ.
ಮಾರ್ಚ್ 2019ರಿಂದ ಯುಎಇ  ಹಾಗೂ ಭಾರತ ನಡುವಣ  ಇಂಧನ ಸಹಕಾರ ಬಲಗೊಂಡಿದೆ. 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಯುಎಇಗೆ ಭೇಟಿ ನೀಡಿದ ನಂತರ ಉಭಯ ರಾಷ್ಟ್ರಗಳ ನಡುವಣ ದ್ವೀಪಕ್ಷೀಯ ಒಪ್ಪಂದಗಳಲ್ಲಿ ನೈಜ ಬದಲಾವಣೆಯಾಗಿದೆ ಎಂದು ಯುಎಇಯ ಭಾರತೀಯ ರಾಯಬಾರಿ ನವದೀಪ್ ಸಿಂಗ್ ಸೂರಿ  ಹೇಳಿದ್ದಾರೆ.
ಕಳೆದ ನಾಲ್ಕು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಯುಎಇ ರಾಜ ಶೇಕ್ ಮೊಹಮ್ಮದ್ ಬಿನ್  ಝಯೇದ್ ನಡುವಣ ಹೆಚ್ಚಿನ ಸ್ನೇಹ ಸಂಪರ್ಕವಿದೆ. ಪ್ರಧಾನಿ ನರೇಂದ್ರ ಮೋದಿ  ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವನ್ನು ಇಡೀ ವಿಶ್ವವೇ ಕಣ್ತುಂಬಿಕೊಂಡಿದೆ. ಅಡನಾಕ್ ಕಟ್ಟಡವನ್ನು ಸುಂದರವಾಗಿ ಅಲಂಕರಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಪುಟ ಸಚಿವರ ಪದ ಗ್ರಹಣ ಸಮಾರಂಭದ ವೇಳೆ ಯುಎಇ ಸರ್ಕಾರದಿಂದ ಅಡ್ ನಾಕ್ ಕಟ್ಟಡ  ಅತ್ಯಾದ್ಬುತ ರೀತಿಯಲ್ಲಿ ಕಂಡುಬಂದಿತ್ತು ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.
SCROLL FOR NEXT