ವಿದೇಶ

ಭಾರತಕ್ಕೆ ಗಡೀಪಾರು ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ: ನೀರವ್ ಮೋದಿ 

Sumana Upadhyaya

ಲಂಡನ್: ಜೈಲಿನಲ್ಲಿರುವಾಗ ನನ್ನ ಮೇಲೆ ಮೂರು ಬಾರಿ ಹಲ್ಲೆ ನಡೆದಿದ್ದು, ಭಾರತಕ್ಕೆ ಗಡೀಪಾರು ಆದೇಶ ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದರೂ ಕೂಡ ಇಂಗ್ಲೆಂಡಿನ ನ್ಯಾಯಾಧೀಶರು ಜಾಮೀನು ನೀಡಲು ನಿರಾಕರಿಸಿದ್ದಾರೆ ಎಂದು ಕಾರಾಗೃಹದಲ್ಲಿರುವ ವಜ್ರೋದ್ಯಮಿ ನೀರವ್ ಮೋದಿ ಆರೋಪಿಸಿದ್ದಾನೆ. 


49 ವರ್ಷದ ನೀರವ್ ಮೋದಿ ವೆಸ್ಟ್ ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ನಿನ್ನೆ ತಮ್ಮ ಬ್ಯಾರಿಸ್ಟರ್ ಹುಗೊ ಕೈತ್ ಕ್ಯುಸಿ ಅವರೊಂದಿಗೆ ಹಾಜರಾಗಿ 5ನೇ ಬಾರಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದನು. 


ಪಂಜಾಬ್ ನ್ಯಾಶನಲ್ ಬ್ಯಾಂಕಿಗೆ 9,100 ಕೋಟಿ ರೂಪಾಯಿಗೂ ಅಧಿಕ ಹಣ ವಂಚನೆ ಮಾಡಿದ ಆರೋಪ ಎದುರಿಸುತ್ತಿರುವ ನೀರವ್ ಮೋದಿಯನ್ನು ಭಾರತಕ್ಕೆ ಗಡೀಪಾರು ಮಾಡುವ ಕುರಿತ ವಿಚಾರಣೆ ಮುಂದಿನ ವರ್ಷ ಮೇ 11ರಿಂದ 15ರವರೆಗೆ ನಡೆಯಲಿದೆ.


ಕಳೆದ ಏಪ್ರಿಲ್ ನಲ್ಲಿ ಮತ್ತು ಕಳೆದ ಮಂಗಳವಾರ ವಂಡ್ಸ್ ವರ್ತ್ ಜೈಲಿನಲ್ಲಿ ನೀರವ್ ಮೋದಿ ವಿರುದ್ಧ ಸಹಕೈದಿಗಳು ಹಲ್ಲೆ ನಡೆಸಿದ್ದಾರೆ. ಹಲ್ಲೆಗೆ ಸಂಬಂಧಿಸಿದಂತೆ ದೂರು ನೀಡಿದಾಗ ಜೈಲಿನ ಸೇವಾ ಸಿಬ್ಬಂದಿ ಸೂಕ್ತವಾಗಿ ಪ್ರತಿಕ್ರಿಯಿಸಿಲ್ಲ, ತಮಗೆ ಕೌನ್ಸಿಲರ್ ಒದಗಿಸುವಂತೆ ನೀರವ್ ಮಾಡಿದ್ದ ಮನವಿಯನ್ನು ಕೂಡ ತಿರಸ್ಕರಿಸಲಾಗಿದೆ ಎಂದು ಅವರ ಪರ ನ್ಯಾಯಾಧೀಶರು ಹೇಳಿದ್ದಾರೆ.


ಮಾಧ್ಯಮಗಳಲ್ಲಿ ಶತಕೋಟಿ ವಜ್ರೋದ್ಯಮಿ ಎಂದು ತಪ್ಪಾಗಿ ನೀರವ್ ಮೋದಿಯನ್ನು ಕರೆಯಲಾಗುತ್ತಿದೆ, ಹೀಗಾಗಿ ಪದೇ ಪದೇ ಅವರ ಮೇಲೆ ಹಲ್ಲೆ ನಡೆಯುತ್ತಿದೆ. ಕೋರ್ಟ್ ಗೆ ಸಲ್ಲಿಸಿದ ಸಾಕ್ಷಿಗಳನ್ನು ಉಲ್ಲೇಖಿಸಿದ ನ್ಯಾಯಾಧೀಶರು ಭಾರತಕ್ಕೆ ಗಡೀಪಾರಿನ ಆದೇಶ ನೀಡಿದರೆ ಅವರು ಆತ್ಮಹತ್ಯೆ ಮಾಡಿಕೊಳ್ಳುವುದು ಖಂಡಿತ, ಭಾರತದಲ್ಲಿ ನ್ಯಾಯಸಮ್ಮತ ವಿಚಾರಣೆ ನಡೆಯಬಹುದು ಎಂಬ ನಂಬಿಕೆ ತಮ್ಮ ಕಕ್ಷಿದಾರರಿಗೆ ಇಲ್ಲ ಎಂದಿದ್ದಾರೆ. 

SCROLL FOR NEXT