ವಿದೇಶ

ಅನ್ಯ ದೇಶಗಳ ಮೇಲೆ ದಾಳಿ ನಡೆಸುವ ಉದ್ದೇಶ ಭಾರತ ಹೊಂದಿಲ್ಲ; ರಾಜನಾಥ್ ಸಿಂಗ್

Srinivasamurthy VN

ಪ್ಯಾರಿಸ್: ಭಾರತ ತನ್ನ ಭದ್ರತೆಗಾಗಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುತ್ತಿದೆಯೇ ಹೊರತು, ಯಾವುದೇ ಅನ್ಯ ದೇಶಗಳ ಮೇಲೆ ದಾಳಿ ಮಾಡುವ ಉದ್ದೇಶದಿಂದ ಅಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಫ್ರಾನ್ಸ್‌ನ ಡಾಸೋ ಏವಿಯೇಷನ್ ಕಂಪನಿ ನಿರ್ಮಿತ ಮೊದಲ ರಫೇಲ್ ಯುದ್ಧ ವಿಮಾನವನ್ನು ಮಂಗಳವಾರ ಅಧಿಕೃತವಾಗಿ ಸ್ವೀಕರಿಸಿದ ನಂತರ, ರಾಜನಾಥ್ ಸಿಂಗ್ ವಿಜಯದಶಮಿಯ ಶುಭದಿನದಂದು ರಫೇಲ್ ಯುದ್ಧ ವಿಮಾನಕ್ಕೆ ಆಯುಧ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು ’ಇದೊಂದು ಮಹತ್ವದ ಐತಿಹಾಸಿಕ ದಿನ. ರಫೇಲ್ ಯುದ್ಧ ವಿಮಾನ ಹಸ್ತಾಂತರಿಸುವ ಮೂಲಕ ಭಾರತ ಮತ್ತು ಫ್ರಾನ್ಸ್ ನಡುವಣ ಸಂಬಂಧ ಮತ್ತಷ್ಟು ಬಲಪಡಿಸಿದಂತಾಗಿದೆ ಎಂದರು.

ರಫೇಲ್ ಯುದ್ಧ ವಿಮಾನ ಸೇರ್ಪಡೆ ಭಾರತೀಯ ವಾಯುಪಡೆಯನ್ನು ಮತ್ತಷ್ಟು ಬಲಿಷ್ಠಗೊಳಿಸಿದಂತಾಗಿದೆ. ದೇಶದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ರಫೇಲ್ ನಂತಹ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಖರೀಸಲಾಗಿದೆ. ಆದರೆ, ಯಾವುದೇ ಅನ್ಯ ದೇಶಗಳ ಮೇಲೆ ದಾಳಿ ಮಾಡುವ ಉದ್ದೇಶ ನಮಗಿಲ್ಲ ಎಂದು ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಆಯುಧ ಪೂಜೆಯ ರಾಜನಾಥ್ ಸಿಂಗ್ ರಫೇಲ್ ಜೆಟ್ ವಿಮಾನದಲ್ಲಿ ಹಾರಾಟ ನಡೆಸಿದರು. ಈ ಸಂಬಂಧ ತಮ್ಮ ಅನುಭವವನ್ನು ವಿವರಿಸಿದ ರಕ್ಷಣಾ ಸಚಿವರು, ರಫೇಲ್ ವಿಮಾನದಲ್ಲಿನ ಪ್ರಯಾಣ ಹೆಚ್ಚು ಆರಾಮದಾಯಕ ಎಂದು ಬಣ್ಣಿಸಿದರು.

ಜೀವನದಲ್ಲಿ ಸೂಪರ್‌ ಸಾನಿಕ್ ವೇಗದಲ್ಲಿ ಪ್ರಯಾಣಿಸುತ್ತೇನೆ ಎಂದು ಊಹಿಸಿರಲಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದರು. ಭಾರತೀಯ ವಾಯುಪಡೆಗೆ ರಫೇಲ್ ಜೆಟ್‌ಗಳ ಸೇರ್ಪಡೆಗೊಳಿಸಿದ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ದೇಶದ ಭದ್ರತೆಗಾಗಿ ಮೋದಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ರಾಜನಾಥ್ ಸಿಂಗ್ ಹೇಳಿದರು. 

ಫೆಬ್ರವರಿ 2021ರ ವೇಳೆಗೆ ಫ್ರಾನ್ಸ್ ಇನ್ನೂ 18 ರಫೇಲ್ ವಿಮಾನಗಳನ್ನು ಭಾರತಕ್ಕೆ ತಲುಪಿಸಲಿದೆ. ಮೇ 2022 ರ ವೇಳೆಗೆ ದೇಶದ ವಾಯುಪಡೆಗೆ 36 ರಫೇಲ್ ಜೆಟ್ ವಿಮಾನಗಳು ಸೇರಲಿವೆ.

SCROLL FOR NEXT