ವಿದೇಶ

ಪಾಕಿಸ್ತಾನ: ತೇಜ್ಗಾಮ್‍ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ: ಸಾವಿನ ಸಂಖ್ಯೆ 73ಕ್ಕೆ ಏರಿಕೆ 

Srinivas Rao BV

ಇಸ್ಲಾಮಾಬಾದ್: ಪಾಕಿಸ್ತಾನದ ರಹೀಮ್ ಯಾರ್ ಖಾನ್ ಬಳಿಯ ಲಿಯಾಕತ್ ಪುರದಲ್ಲಿ ತೇಜ್ಗಾಮ್ ಎಕ್ಸ್ ಪ್ರೆಸ್ ರೈಲಿನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 73 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

ಸಾವು-ನೋವು ಸಂಖ್ಯೆಯನ್ನು ರಹೀಂ ಯಾರ್ ಖಾನ್ ಜಿಲ್ಲಾ ಪೊಲೀಸ್ ಅಧಿಕಾರಿ ಅಮೀರ್ ತೈಮೂರ್ ಖಾನ್ ಖಚಿತಪಡಿಸಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.

ಗಾಯಾಳುಗಳನ್ನು ಲಿಯಾಕತ್ ಪುರ ಮತ್ತು ಬಹವಾಲ್ ಪುರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಖಾನ್ ಹೇಳಿದ್ದಾರೆ. ರೈಲಿನಲ್ಲಿ ಬೆಂಕಿಯನ್ನು ನಂದಿಸಿದ್ದು, ಬೋಗಿಗಳನ್ನು ತಂಪಾಗಿಸುವ ಪ್ರಯತ್ನಗಳು ನಡೆಯುತ್ತಿವೆ.  ಮೃತರ ಕುಟುಂಬಗಳಿಗೆ ತಲಾ 15 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 5 ಲಕ್ಷ ರೂ. ಪ್ರಕಟಿಸಲಾಗಿದೆ ಎಂದು ರೈಲ್ವೆ ಸಚಿವ ಶೇಖ್ ರಶೀದ್ ತಿಳಿಸಿದ್ದಾರೆ. 

ಮೃತಪಟ್ಟವರ ಸಂಖ್ಯೆಯನ್ನು ಜಿಲ್ಲಾ ರಕ್ಷಣಾ ಸೇವಾ ಮುಖ್ಯಸ್ಥ ಬಕೀರ್ ಹುಸೇನ್ ಖಚಿತಪಡಿಸಿದ್ದು, ಮೃತರನ್ನು ಡಿಎನ್ ಎ ಮೂಲಕ ಗುರುತಿಸಲಾಗುವುದು ಎಂದು ಹೇಳಿದ್ದಾರೆ. ಅಡುಗೆ ಅನಿಲ ಸಿಲಿಂಡರ್ ನೊಂದಿಗೆ ರೈಲು ಹತ್ತಲು ಪ್ರಯಾಣಿಕನಿಗೆ ಅವಕಾಶ ನೀಡಿದ್ದು ನಮ್ಮ ನಿರ್ಲಕ್ಷ್ಯವಾಗಿದೆ ಎಂದು ರೈಲ್ವೆ ಸಚಿವರು ಹೇಳಿದ್ದಾರೆ.

ಪ್ರಯಾಣಿಕರೊಬ್ಬರು ಹೊತ್ತ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಈ ಘಟನೆ ಸಂಭವಿಸಿದೆ. ಪ್ರಯಾಣಿಕರು ಸಿಲಿಂಡರ್ ಬಳಸಿ ಉಪಾಹಾರ ಅಡುಗೆ ಮಾಡುತ್ತಿದ್ದ ವೇಳೆ, ಅದು ಸ್ಫೋಟಗೊಂಡು ರೈಲಿನ ಮೂರು ಬೋಗಿಗಳು ಬೆಂಕಿಗೆ ಆಹುತಿಯಾಗಿವೆ.

SCROLL FOR NEXT