ವಿದೇಶ

ಕುಲಭೂಷಣ್ ಜಾಧವ್ ಕೇಸಿನಲ್ಲಿ ಪಾಕಿಸ್ತಾನ ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸಿದೆ: ಅಂತಾರಾಷ್ಟ್ರೀಯ ಕೋರ್ಟ್ 

Sumana Upadhyaya

ಯುನೈಟೆಡ್ ನೇಷನ್ಸ್: ಪಾಕಿಸ್ತಾನದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಭಾರತದ ಮಾಜಿ ನೌಕಾಪಡೆ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಪ್ರಕರಣದಲ್ಲಿ ವಿಯೆನ್ನಾ ಒಪ್ಪಂದದಡಿ ಜವಾಬ್ದಾರಿಗಳನ್ನು ಪಾಕಿಸ್ತಾನ ಉಲ್ಲಂಘಿಸಿದೆ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯದ ಅಧ್ಯಕ್ಷ ನ್ಯಾಯಾಧೀಶ ಅಬ್ದುಲ್ಕಾವಿ ಯೂಸುಫ್ ವಿಶ್ವಸಂಸ್ಥೆಗೆ ತಿಳಿಸಿದ್ದಾರೆ.


ಅಂತಾರಾಷ್ಟ್ರೀಯ ನ್ಯಾಯಾಲಯದ ವರದಿಯನ್ನು 193 ಸದಸ್ಯಗಳ ವಿಶ್ವಸಂಸ್ಥೆಗೆ ಸಲ್ಲಿಸಿದ ನ್ಯಾಯಾಧೀಶ ಯೂಸಫ್, ವಿಯೆನ್ನಾ ಒಪ್ಪಂದದ ವಿಧಿ 36ರಡಿಯಲ್ಲಿ ಪಾಕಿಸ್ತಾನ ತನ್ನ ಜವಾಬ್ದಾರಿಯನ್ನು ಮರೆತು ಒಪ್ಪಂದ ಉಲ್ಲಂಘಿಸಿದ್ದು ಈ ನಿಟ್ಟಿನಲ್ಲಿ ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.


ಜಾಧವ್ ಗೆ ನೀಡಲಾಗಿರುವ ಮರಣದಂಡನೆ ಶಿಕ್ಷೆಯನ್ನು ಪುನರ್ ಪರಿಶೀಲಿಸಿ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯ ಹೇಳಿದ್ದು ಕುಲಭೂಷಣ್ ಜಾಧವ್ ಕೇಸಿನಲ್ಲಿ ಭಾರತಕ್ಕೆ ಸಿಕ್ಕ ಪ್ರಮುಖ ಜಯವಾಗಿದೆ. ಬೇಹುಗಾರಿಕೆ ಮತ್ತು ಭಯೋತ್ಪಾದನೆ ಆರೋಪಗಳಡಿಯಲ್ಲಿ ಏಪ್ರಿಲ್ 2017ರಲ್ಲಿ ಪಾಕಿಸ್ತಾನ ಮಿಲಿಟರಿ ಕೋರ್ಟ್ ಕುಲಭೂಷಣ್ ಜಾಧವ್ ಗೆ ಮರಣದಂಡನೆ ಶಿಕ್ಷೆ ನೀಡಿತ್ತು.


ಇದಕ್ಕೆ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದ ಭಾರತ, ಕಾನ್ಸುಲರ್ ಸಂಬಂಧಗಳ ವಿಚಾರದಲ್ಲಿ  1963ರ ವಿಯೆನ್ನಾ ಒಪ್ಪಂದ ಉಲ್ಲಂಘಿಸಿದ ಪಾಕಿಸ್ತಾನ ತನ್ನ ದೇಶದ ಕುಲಭೂಷಣ್ ಜಾಧವ್ ಗೆ ದೂತಾವಾಸ ಸೌಲಭ್ಯ ಸಿಗದಂತೆ ಮಾಡಿದೆ ಎಂದು ವಾದಿಸಿತ್ತು.

ಅಂತಾರಾಷ್ಟ್ರೀಯ ಕೋರ್ಟ್​ನ ನಿರ್ದೇಶನದ ಪ್ರಕಾರ ಸೆ. 2ರಂದು ಪಾಕಿಸ್ತಾನವು ಕುಲಭೂಷಣ್ ಜಾಧವ್​ಗೆ ಭಾರತೀಯ ರಾಜತಾಂತ್ರಿಕ ಸಂಪರ್ಕಕ್ಕೆ ಒಮ್ಮೆ ಅವಕಾಶ ಮಾಡಿಕೊಟ್ಟಿತ್ತು. ಇಸ್ಲಾಮಾಬಾದ್​ನಲ್ಲಿರುವ ಭಾರತೀಯ ರಾಜತಾಂತ್ರಿಕ ಅಧಿಕಾರಿ ಗೌರವ್ ಅಹ್ಲೂವಾಲಿಯಾ ಅವರು ಕುಲಭೂಷಣ್ ಅವರನ್ನು ಜೈಲಿನಲ್ಲಿ ಭೇಟಿಯಾಗಿ ಒಂದು ಗಂಟೆ ಕಾಲ ಮಾತನಾಡಿದ್ದರು. ಭೇಟಿಯಾದ ಸ್ಥಳವನ್ನು ಪಾಕಿಸ್ತಾನ ಗೌಪ್ಯವಾಗಿಟ್ಟಿತ್ತು.

ಭಾರತದ ನಿವೃತ್ತ ನೌಕಾಪಡೆ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಪಾಕಿಸ್ತಾನದ ಭದ್ರತಾ ಪಡೆಗಳು 2016ರ ಮಾರ್ಚ್ 3ರಂದು ಬಂಧಿಸಿದ್ದವು. ನೌಕಾಪಡೆಯ ಅಧಿಕಾರಿಯಾಗಿ ಕುಲಭೂಷಣ್ ಪಾಕಿಸ್ತಾನದಲ್ಲಿ ಗೂಢಚಾರಿಕೆ ಕೆಲಸ ಮಾಡಿಕೊಂಡು ಅನೇಕ ವಿಧ್ವಂಸಕ ಕೃತ್ಯಗಳನ್ನು ಮಾಡಿದ್ದರು ಎಂಬುದು ಪಾಕಿಸ್ತಾನದ ಆರೋಪ. ಬಲೂಚಿಸ್ತಾನದಲ್ಲೇ ಇದ್ದ ಅವರನ್ನು ಬಂಧಿಸಲಾಯಿತು ಎಂದು ಪಾಕ್ ಹೇಳಿಕೊಂಡಿತ್ತು. ಆದರೆ, ಕುಲಭೂಷಣ್ ಅವರು ನೌಕಾಪಡೆಯಿಂದ ನಿವೃತ್ತರಾಗಿ ಇರಾನ್ ದೇಶದಲ್ಲಿ ತಮ್ಮದೇ ವೈಯಕ್ತಿಕ ವ್ಯವಹಾರ ನಡೆಸುತ್ತಿದ್ದರು. ಅಲ್ಲಿಂದ ಅವರನ್ನು ಅಚಾನಕ್ಕಾಗಿ ಪಾಕಿಸ್ತಾನೀಯರು ಬಂಧಿಸಿ ಕರೆದೊಯ್ದರು ಎಂಬುದು ಭಾರತದ ವಾದವಾಗಿದೆ.

SCROLL FOR NEXT