ವಿದೇಶ

ಪೈಲಟ್ ಗಳ ಮುಷ್ಕರ: ಬರೊಬ್ಬರಿ 1,500 ವಿಮಾನಗಳ ಸಂಚಾರ ರದ್ದು!

Srinivasamurthy VN

ಸಂಧಾನಕ್ಕೆ ಮುಂದಾದ ಬ್ರಿಟೀಷ್ ಏರ್ವೇಸ್, ಪ್ರತಿಭಟನೆಯಿಂದ ಪ್ರಯಾಣಿಕರಿಗೆ ತೊಂದರೆ

ಲಂಡನ್: ಭಾರತದ ಏರ್ ಇಂಡಿಯಾ, ಕಿಂಗ್ ಷಿಷರ್ ಏರ್ ಲೈನ್ಸ್ ಗಳ ವಿವಾದ ಹಸಿರಾಗಿರುವಂತೆಯೇ ಅತ್ತ ಬ್ರಿಟನ್ ನಲ್ಲೂ ಅಂತಹುದೇ ಸಮಸ್ಯೆ ಎದುರಾಗಿದ್ದು, ವೇತನ ವಿಚಾರವಾಗಿ ಬ್ರಿಟೀಷ್ ಏರ್ವೇಸ್ ನ ಪೈಲಟ್ ಗಳು ಮುಷ್ಕರ ನಡೆಸಿದ್ದಾರೆ.

ಬ್ರಿಟಿಷ್ ಏರ್ವೇಸ್ ಸಂಸ್ಥೆಯ ಪೈಲಟ್‌ ಗಳ ಮುಷ್ಕರದಿಂದಾಗಿ ಬ್ರಿಟನ್ ನ 1,500 ಕ್ಕೂ ಹೆಚ್ಚು ವಿಮಾನ ಸಂಚಾರ ರದ್ದುಗೊಂಡಿದ್ದು,ಪರಿಣಾಮ ಅನೇಕ ಪ್ರಯಾಣಿಕರಿಗೆ ತೊಂದರೆಯಾಗಿದೆ. ಈ ಕುರಿತು ದಿ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದ್ದು, ಪೈಲಟ್ ಗಳ ಮುಷ್ಕರದಿಂದಾಗಿ ಸೋಮವಾರ ಮತ್ತು ಮಂಗಳವಾರ ನಿಗದಿಯಾಗಿದ್ದ 1,500 ವಿಮಾನಗಳ ಸಂಚಾರವನ್ನುಇದೆ ಕಾರಣಕ್ಕಾಗಿ ರದ್ದು ಪಡಿಸಲಾಗಿದೆ. ಅಲ್ಲದೆ ಮುಷ್ಕರದಿಂದಾಗಿ ಸುಮಾರು 280,000 ಪ್ರಯಾಣಿಕರ ಪ್ರಯಾಣದ ಮೇಲೆ ಪರಿಣಾಮ ಬೀರಿದೆ.

ಕಳೆದ ತಿಂಗಳೇ ಈ ಕುರಿತಂತೆ ಬ್ರಿಟೀಷ್ ಏರ್ ಲೈನ್ ಸಂಸ್ಥೆಗೆ ಪೈಲಟ್ ಗಳ ಒಕ್ಕೂಟ ನೋಟಿಸ್ ಜಾರಿ ಮಾಡಿತ್ತು. ತಿಂಗಳೊಳಗೆ ವೇತನ ಸಮಸ್ಯೆ ಪರಿಹರಿಸದಿದ್ದರೆ, ಸೆಪ್ಟೆಂಬರ್ 9 ರಿಂದ 11ರವರೆಗೂ ಮುಷ್ಕರ ನಡೆಸುವುದಾಗಿ ಹೇಳಿತ್ತು. ಈ ನೋಟಿಸ್ ಗೆ ಉತ್ತರ ನೀಡಿದ್ದ ಬ್ರಿಟೀಷ್ ಏರ್ ಲೈನ್ ಸಂಸ್ಥೆ ಶೀಘ್ರ ಕೈಗಾರಿಕಾ ಸಭೆ (industrial action) ಕರೆದು ಈ ಕುರಿತು ಚರ್ಚೆ ನಡೆಸುವುದಾಗಿ ಹೇಳಿತ್ತು. ಆದರೆ ಕಾರಣಾಂತರಗಳಿಂದಾಗಿ ಈ ಸಭೆಯನ್ನು ಸೆಪ್ಟೆಂಬರ್ 27ಕ್ಕೆ ಮುಂದೂಡಲಾಗಿತ್ತು. 

ಇದರಿಂದ ಆಕ್ರೋಶಗೊಂಡ ಪೈಲಟ್ ಗಳ ಒಕ್ಕೂಟ ಉದ್ದೇಶ ಪೂರ್ವಕವಾಗಿಯೇ ಸಭೆಯನ್ನು ಮುಂದೂಡಲಾಗಿದೆ. ಇನ್ನು ಈ ಹಿಂದಿನ ಸಂಧಾನದಲ್ಲಿ ಬ್ರಿಟೀಷ್ ಏರ್ವೇಸ್ ಸಂಸ್ಥೆಯ ಲಾಭವನ್ನು ಪೈಲಟ್ ಗಳೊಂದಿಗೆ ಹಂಚಿಕೊಳ್ಳಲು ನಿರಾಕರಿಸಿತ್ತು. ಆದರೆ ಇದಕ್ಕೆ ಪೈಲಟ್ ಗಳ ಒಕ್ಕೂಟ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಸಂಸ್ಛೆಗೆ ಬರುವ ಲಾಭಾಂಶವನ್ನು ಪೈಲಟ್ ಗಳಿಗೂ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ. 

ಇನ್ನು ಏರ್ ಲೈನ್ ಸಂಸ್ಥೆ ಮತ್ತು ಪೈಲಟ್ ಗಳ ನಡುವಿನ ತಿಕ್ಕಾಟದಲ್ಲಿ ಬ್ರಿಟನ್ ವಿಮಾನ ಪ್ರಯಾಣಿಕರು ಹೈರಾಣಾಗಿದ್ದು, ಪರ್ಯಾಯ ಏರ್ ಲೈನ್ ಗಳತ್ತ ಮುಖ ಮಾಡುತ್ತಿದ್ದಾರೆ.

SCROLL FOR NEXT