ವಿದೇಶ

ಡ್ರೋನ್ ದಾಳಿಗೊಳಗಾದ ಸೌದಿ ಅರೇಬಿಯಾದ ಘಟಕಗಳಲ್ಲಿ ತೈಲ ಉತ್ಪಾದನೆ ತಾತ್ಕಾಲಿಕ ಸ್ಥಗಿತ 

Sumana Upadhyaya

ರಿಯಾದ್: ಯೆಮನ್ ಬಂಡುಕೋರರಿಂದ ದಾಳಿಗೊಳಗಾದ ಸೌದಿ ಅರೇಬಿಯಾದ ಅರಮ್ಕೊ ತೈಲ ಉತ್ಪಾದನೆ ಘಟನೆಗಳಲ್ಲಿ ತೈಲ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕಂಪೆನಿಯ ಒಟ್ಟು ಉತ್ಪಾದನೆ, ಮಾರಾಟದ ಮೇಲೆ ಪರಿಣಾಮ ಬೀರಲಿದೆ ಎಂದು ಇಂಧನ ಸಚಿವರು ತಿಳಿಸಿದ್ದಾರೆ.


ಅಬ್ಕೈಕ್ ಮತ್ತು ಖುರೈಸ್ ಘಟಕಗಳಲ್ಲಿನ ತೈಲ ಉತ್ಪನ್ನದ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಸೌದಿ ಅರೇಬಿಯಾ ಇಂಧನ ಖಾತೆ ಸಚಿವ ಪ್ರಿನ್ಸ್ ಅಬ್ದುಲಾಜಿಜ್ ಬಿನ್ ಸಲ್ಮಾನ್ ತಿಳಿಸಿದ್ದಾರೆ. ಒಟ್ಟು ಉತ್ಪಾದನೆಯ ಶೇಕಡಾ 50ರಷ್ಟು ಕಡಿಮೆಯಾಗಿದೆ. ಕಚ್ಚಾ ತೈಲ ಪ್ರತಿದಿನ 5.7 ದಶಲಕ್ಷ ಬ್ಯಾರಲ್ ಗಳಷ್ಟು ಕಡಿಮೆಯಾಗಿದೆ ಎಂದು ದೇಶೀ ಒಡೆತನದ ಅರಮ್ಕೊ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.


ತೈಲ ಉತ್ಪನ್ನವನ್ನು ಮತ್ತೆ ಆರಂಭಿಸಲು ಕೆಲಸಗಳು ನಡೆಯುತ್ತಿದ್ದು ಮುಂದಿನ ಎರಡು ದಿನಗಳಲ್ಲಿ ಪ್ರಗತಿಯ ಬಗ್ಗೆ ತಿಳಿಸುತ್ತೇವೆ ಎಂದು ಅರಮ್ಕೊ ಸಿಇಒ ಅಮಿನ್ ನಸ್ಸರ್ ತಿಳಿಸಿದ್ದಾರೆ.


ಪೂರ್ವ ಸೌದಿ ಅರೇಬಿಯಾದ ಎರಡು ಪ್ರಮುಖ ಅರಮ್ಕೊ ಕೇಂದ್ರಗಳಾದ ಅಬ್ಕೈಕ್ ಮತ್ತು ಖುರೈಸ್ ಘಟಕಗಳ ಮೇಲೆ ಹುತಿ ಬಂಡುಕೋರರು ದಾಳಿ ನಡೆಸಿದೆ. ದಾಳಿಯಲ್ಲಿ ಯಾರಿಗೂ ಗಾಯಗೊಂಡ ಬಗ್ಗೆ ವರದಿಯಾಗಿಲ್ಲ. 


ಇರಾನ್ ಜೊತೆಗೆ ಸಂಪರ್ಕ ಹೊಂದಿರುವ ಹುತಿ ಬಂಡುಕೋರರು 10 ಡ್ರೋನ್ ಮೂಲಕ ಬಹುದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ. 


ಅಮೆರಿಕಾ ಗೃಹ ಕಾರ್ಯದರ್ಶಿ ಮೈಕ್ ಪೊಂಪಿಯೊ, ದಾಳಿಗೆ ಇರಾನ್ ಕಾರಣ ಎಂದು ಆರೋಪಿಸಿದ್ದಾರೆ. ವಿಶ್ವದ ಇಂಧನ ಪೂರೈಕೆ ಘಟಕಗಳ ಮೇಲೆ ಇರಾನ್ ದಾಳಿ ಆರಂಭಿಸಿದೆ ಎಂದರು.


ಅಮೆರಿಕಾದ ಸಹವರ್ತಿ ಸೌದಿ ಅರೇಬಿಯಾ, ಬಂಡುಕೋರರಿಗೆ ಶಸ್ತ್ರಾಸ್ತ್ರಗಳನ್ನು ಇರಾನ್ ಪೂರೈಸುತ್ತದೆ ಎಂದು ಆರೋಪಿಸುತ್ತದೆ. ಇರಾನ್ ಈ ಆರೋಪವನ್ನು ನಿರಾಕರಿಸಿದೆ. 

SCROLL FOR NEXT