ವಿದೇಶ

ಪಾಕಿಸ್ತಾನದೊಂದಿಗೆ ಮಾತುಕತೆಗೆ ಭಾರತ ಸಿದ್ಧ, ಆದರೆ ಟೆರರಿಸ್ತಾನದೊಂದಿಗೆ ಅಲ್ಲ: ಜೈ ಶಂಕರ್ ಕಿಡಿ!

Srinivasamurthy VN

'ಕಾಶ್ಮೀರದಲ್ಲಿ ಪಾಕ್ ಕಟ್ಟಿದ್ದ ದಶಕಗಳ ಕನಸು ಒಡೆದು ಚೂರಾಗಿದೆ, ಹೀಗಾಗಿ ಅವರ ಆಕ್ರೋಶ ಸಹಜ'

ನ್ಯೂಯಾರ್ಕ್: ಪಾಕಿಸ್ತಾನದೊಂದಿಗೆ ಮಾತುಕತೆಗೆ ಭಾರತ ಸದಾ ಸಿದ್ಧ, ಆದರೆ ಟೆರರಿಸ್ತಾನದೊಂದಿಗೆ ಅಲ್ಲ ಎಂದು ಹೇಳುವ ಮೂಲಕ ಪಾಕಿಸ್ತಾನವನ್ನು ಜಾಗತಿಕ ಮಟ್ಟದಲ್ಲಿ ವಿದೇಶಾಂಗ ಸಚಿವ ಜೈ ಶಂಕರ್ ತಿವಿದಿದ್ದಾರೆ.

ನ್ಯೂಯಾರ್ಕ್ ನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ವಿದೇಶಾಂಗ ಸಚಿವ ಜೈ ಶಂಕರ್ ಅವರು, 'ಒಂದು ನೆರೆಯ ದೇಶವಾಗಿ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲು ಭಾರತಕ್ಕೆ ಯಾವುದೇ ರೀತಿಯ ಸಮಸ್ಯೆ ಇಲ್ಲ. ಆದರೆ ಸಮಸ್ಯೆ ಇರುವುದು ಅಲ್ಲಿನ ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ಕುರಿತು ಮಾತ್ರ. ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆ ಮತ್ತು ಭಯೋತ್ಪಾದನೆ ನಡುವೆ ಒಂದನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು. ಭಯೋತ್ಪಾದನೆಯ ಜೊತೆ ಜೊತೆಗೆ ದ್ವಿಪಕ್ಷೀಯ ಮಾತುಕತೆ ಸಾಧ್ಯವೇ ಇಲ್ಲ ಎಂದು ಜೈಶಂಕರ್ ಹೇಳಿದ್ದಾರೆ.

ಪಾಕ್ ಕಟ್ಟಿದ್ದ ದಶಕಗಳ ಕೋಟೆ, ಕನಸು ಛಿದ್ರವಾಗಿದೆ
ಇದೇ ವೇಳೆ ಕಾಶ್ಮೀರ ವಿಚಾರವಾಗಿ ಮಾತನಾಡಿದ ಜೈಶಂಕರ್, ''ಕಾಶ್ಮೀರ ವಿಚಾರವಾಗಿ ಪಾಕಿಸ್ತಾನದ ಆಕ್ರೋಶ ಸಹಜ. ಕಾಶ್ಮೀರದಲ್ಲಿ ಪಾಕಿಸ್ತಾನ ಕಟ್ಟಿದ್ದ ದಶಕಗಳ ಕನಸು ಮತ್ತು ಕೋಟೆ ಈಗ ಒಡೆದು ಚೂರಾಗಿದೆ. ವಿಧಿ 370ರ ರದ್ಧತಿ ಮೂಲಕ ಕಾಶ್ಮೀರದಲ್ಲೂ ಅಭಿವೃದ್ಧಿ ಸಾಧ್ಯ ಎಂಬುದನ್ನು ತೋರಿಸಿಕೊಡಲಾಗಿದೆ. ಈಗ ಅಲ್ಲಿನ ಜನರ ಮನೋಭಾವ ಗನ್ ಗಳ ಬದಲಾಗಿ ಅಭಿವೃದ್ಧಿಯತ್ತ ಸಾಗಿದೆ. ಪಾಕಿಸ್ತಾನ ದಶಕಗಳಿಂದ ಕಾಶ್ಮೀರ ವಿಚಾರವನ್ನು ಭಯೋತ್ಪಾದನೆ ಮೂಲಕವೇ ನೋಡುತ್ತಿತ್ತು. 70 ವರ್ಷಗಳಿಂದ ಭಯೋತ್ಪಾದನೆ ಮೇಲೆ ಬಂಡವಾಳ ಹೂಡುತ್ತಿತ್ತು. ಇನ್ನು ಮುಂದೆ ಅದಕ್ಕೆ ಆಸ್ಪದವಿಲ್ಲ. ಇದೇ ಕಾರಣಕ್ಕೆ ಪಾಕಿಸ್ತಾನ ಆಕ್ರೋಶಗೊಂಡಿದೆ. ಇದಕ್ಕೆ ಚೀನಾ ಕೂಡ ಸಾಥ್ ನೀಡುತ್ತಿದೆ ಎಂದು ಜೈಶಂಕರ್ ಹೇಳಿದ್ದಾರೆ.

ಅಂತೆಯೇ ಇದೇ ವೇಳೆ ಪಾಕಿಸ್ತಾನ ಮತ್ತು ಅದನ್ನು ಬೆಂಬಲಿಸುತ್ತಿರುವ ಚೀನಾಗೆ ಖಡಕ್ ಉತ್ತರ ನೀಡಿರುವ ಜೈ ಶಂಕರ್, ಕಾಶ್ಮೀರ ವಿಚಾರವಾಗಿ ನಾವು ಯಾವುದೇ ನಿರ್ಧಾರ ಕೈಗೊಂಡರೂ ಅದು ನಮ್ಮ ಗಡಿಯೊಳಗೆ ಮಾತ್ರ. ಕಾಶ್ಮೀರ ಭಾರತ ಆಂತರಿಕ ವಿಚಾರವಾಗಿದೆ. ನಮ್ಮ ಗಡಿಯೊಳಗಿನ ಯಾವುದೇ ಸ್ವತಂತ್ರ್ಯ ನಿರ್ಧಾರ ನಮ್ಮ ಹಕ್ಕು. ಈ ವಿಚಾರದಲ್ಲಿ ಮೂರನೇಯವರ ಮಧ್ಯ ಪ್ರವೇಶವನ್ನು ನಾವು ಸಹಿಸುವುದಿಲ್ಲ ಎಂದು ಜೈ ಶಂಕರ್ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

SCROLL FOR NEXT