ವಿದೇಶ

ಕೋವಿಡ್-19: ಭಾರತದಿಂದ ಅಮೆರಿಕಕ್ಕೆ ಬಂದಿಳಿದ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳು

Sumana Upadhyaya

ವಾಷಿಂಗ್ಟನ್ : ಅಮೆರಿಕ ಸರ್ಕಾರದ ಮನವಿಗೆ ಸ್ಪಂದಿಸಿ ಭಾರತ ಕಳುಹಿಸಿಕೊಟ್ಟಿರುವ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ಅಮೆರಿಕ ತಲುಪಿದೆ, ಮಲೇರಿಯಾ ಜ್ವರಕ್ಕೆ ನೀಡಲಾಗುವ ಈ ಔಷಧಿಯ ಮೇಲಿನ ರಫ್ತು ನಿರ್ಬಂಧವನ್ನು ಭಾರತ ಸರ್ಕಾರ ತೆಗೆದುಹಾಕಿದ ನಂತರ ಅಮೆರಿಕಕ್ಕೆ ಇದು ಲಭ್ಯವಾಗಿದೆ. ಅಮೆರಿಕ ಸೇರಿದಂತೆ ಬೇರೆ ಕೆಲವು ದೇಶಗಳಿಗೆ ಮಾನವೀಯ ನೆಲೆಯಲ್ಲಿ ಭಾರತ ಕೋವಿಡ್-19 ಸೋಂಕು ಗುಣಪಡಿಸಲು ಈ ಔಷಧಿಯನ್ನು ಕಳುಹಿಸಿಕೊಟ್ಟಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿಕೊಂಡಿದ್ದ ಮನವಿಯಂತೆ ಕಳೆದ ವಾರ ಭಾರತ ಸರ್ಕಾರ 35.82 ಲಕ್ಷ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ರಫ್ತು ಮಾಡಿತ್ತು. ಇದರ ಜೊತೆಗೆ 9 ಮೆಟ್ರಿಕ್ ಟನ್ ಔಷಧೀಯ ಘಟಕಾಂಶ ಅಥವಾ ಎಪಿಐ ಔಷಧದ ತಯಾರಿಕೆಗೆ ಅಗತ್ಯವಿರುವ ಎಪಿಐಯನ್ನು ಕೂಡ ಕಳುಹಿಸಿಕೊಟ್ಟಿತ್ತು. ಅಮೆರಿಕಕ್ಕೆ ಮಾತ್ರೆ ಬಂದು ತಲುಪಿದೆ ಎಂದು ಅಮೆರಿಕದಲ್ಲಿರುವ ಭಾರತದ ರಾಯಭಾರಿ ತರಂಜಿತ್ ಸಿಂಗ್ ಸಂಧು ಟ್ವೀಟ್ ಮಾಡಿದ್ದಾರೆ.

ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯನ್ನು ಅಮೆರಿಕದ ಆಹಾರ ಮತ್ತು ಔಷಧಿ ಆಡಳಿತ ಕೋವಿಡ್-19 ರೋಗಿಗಳ ಮೇಲೆ ಬಳಸಬಹುದಾಗಿದ್ದು ನ್ಯೂಯಾರ್ಕ್ ನಲ್ಲಿ 1500ಕ್ಕೂ ಹೆಚ್ಚು ರೋಗಿಗಳ ಮೇಲೆ ಪರೀಕ್ಷೆ ನಡೆಸಲಾಗಿದೆ. ಭಾರತದ ಈ ನೆರವನ್ನು ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಸ್ವಾಗತಿಸಿದ್ದಾರೆ.

ಮಲೇರಿಯಾ ಮತ್ತು ಸಂಧಿವಾತದಂತಹ ರೋಗಗಳಿಗೆ ಚಿಕಿತ್ಸೆ ನೀಡಲು ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಬಳಸಲಾಗುತ್ತದೆ. ವಿವಿಧ ಅಧ್ಯಯನಗಳಲ್ಲಿ, ಈ ಔಷಧವು ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ ಎಂದು ತಿಳಿದುಬಂದಿದೆ.

SCROLL FOR NEXT