ವಿದೇಶ

ಕೊರೋನಾ ಹೋರಾಟಕ್ಕೆ ಸಾಥ್ ನೀಡಿದ ಸ್ವಿಜರ್ಲೆಂಡ್: ಸ್ವಿಸ್ ಪರ್ವತದ ಮೇಲೆ ಭಾರತದ ತ್ರಿವರ್ಣಧ್ವಜ ಪ್ರತಿಫಲನ

Manjula VN

ಜಿನೇವಾ: ಸ್ವಿಜರ್ಲೆಂಡ್'ನ ಹೆಗ್ಗುರುತುಗಳಲ್ಲಿ ಒಂದಾಗಿರುವ ಮ್ಯಾಟರ್ ಹಾರ್ನ್ ಪರ್ವತಗಳ ಮೇಲೆ ಶುಕ್ರವಾರ ರಾತ್ರಿ ಭಾರತದ ರಾಷ್ಟ್ರಧ್ವಜವಾದ ತ್ರಿವರ್ಣಧ್ವಜದ ಛಾಯಾವರ್ಣವನ್ನು ಬಿಡಲಾಗಿದ್ದು, ಈ ಮೂಲಕ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಭಾರತದೊಂದಿಗೆ ಕೈಜೋಡಿಸಿದೆ. 

ಸ್ವಿಜರ್ಲೆಂಡ್ ಖ್ಯಾತ ಬೆಳಕಿನ ಕಲಾವಿದ ಗ್ರೇ ಹಾಫ್ ಸೆಟ್ಟರ್ ಅವರು 14,690 ಅಡಿ ಎತ್ತರದ ಪರ್ವತವನ್ನು ತ್ರಿವರ್ಣಧ್ವಜದಿಂದ ಕಂಗೊಳಿಸುವಂತೆ ಮಾಡಿದ್ದಾರೆ. 

4 ಕಿ.ಮೀ ದೂರದಿಂಲೇ ಸೆಟ್ಟರ್ ಅವರು, ಲೈಟ್ ಪ್ರೊಜೆಕ್ಷನ್ ಇರಿಸಿ, ಪರ್ವತದ ಮೇಲೆ ಚಿತ್ತಾರ ಮೂಡಿಸಿ, ಇದು ಭರವಸೆಯ ಬೆಳಕು ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. 

ಭಾರತದ ರಾಜತಾಂತ್ರಿಕ ಅಧಿಕಾರಿಣಿ ಗುರ್ಲೀನ್ ಕೌರ್ ಅವರು, ಈ ಛಾಯಾಚಿತ್ರಗಳನ್ನು ಟ್ವೀಟ್ ಮಾಡಿದ್ದು, ಹಿಮಾಲಯದಿಂದ ಸ್ವಿಜರ್ಲೆಂಡ್'ನ ಆಲ್ಪ್ ಪರ್ವತದವರೆಗೆ ಸ್ನೇಹ ವಿಸ್ತರಿಸಿದೆ. ಧನ್ಯವಾದ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ. 

ಬುಧವಾರ ರಾತ್ರಿ ಕೂಡ ಸ್ವಿಸ್, ಅಮೆರಿಕಾ, ಬ್ರಿಟನ್, ಇಟಲಿಗಳ ರಾಷ್ಟ್ರಧ್ವಜಗಳು ಪರ್ವತದ ಮೇಲೆ ಪ್ರತಿಫಲಿಸುವಂತೆ ಮಾಡಲಾಗಿತ್ತು. 

ಹಾರ್ನ್ ಪರ್ವತಗಳ ಮೇಲೆ ಭಾರತದ ರಾಷ್ಟ್ರಧ್ವಜ ಪ್ರತಿಫಲಿಸಿರುವ ಈ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ವೈರಲ್ ಆಗಿದೆ. 

SCROLL FOR NEXT