ವಿದೇಶ

ಚೀನಾ ತಂಟೆಗೆ ಭಾರತದ ಉತ್ತರ: ಹಡಗು ಧ್ವಂಸಗೊಳಿಸುವ ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ಯಶಸ್ವಿ!

Srinivasamurthy VN

ನವದೆಹಲಿ: ಲಡಾಖ್ ನಲ್ಲಿ ಪದೇ ಪದೇ ಕಾಲು ಕೆರೆದು ಖ್ಯಾತೆ ತೆಗೆಯುತ್ತಿರುವ ಚೀನಾ ಸೇನೆಗೆ ತನ್ನ ಕಾರ್ಯದ ಮೂಲಕವೇ ತಿರುಗೇಟು ನೀಡಿರುವ ಭಾರತೀಯ ಸೇನೆ ಯುದ್ಧ ನೌಕೆಗಳನ್ನು ಧ್ವಂಸ ಮಾಡಬಲ್ಲ ಬ್ರಹ್ಮೋಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷೆ ಮಾಡಿದೆ.

ಸಮುದ್ರದಲ್ಲಿ ಹಡಗುಗಳನ್ನು ಗುರಿಯಾಗಿಸಿ ದಾಳಿ ನಡೆಸಬಲ್ಲ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿಗಳ ಪರೀಕ್ಷೆಯನ್ನು ಭಾರತ ಯಶಸ್ವಿಯಾಗಿ ನಡೆಸಿದ್ದು, ಈ ಮಾದರಿಯ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿರುವು ಭಾರತ ಸಾಧಿಸಿದ ಅತಿದೊಡ್ಡ ಮೈಲುಗಲ್ಲು ಎಂದೇ ವಿಶ್ಲೇಷಿಸಲಾಗುತ್ತಿದೆ.

ಅಂಡಮಾನ್ ಹಾಗೂ ನಿಕೋಬಾರ್ ದ್ವೀಪ ಸಮೂಹದಲ್ಲಿ ಭಾರತೀಯ ನೌಕಾ ಪಡೆ ಈ ಪ್ರಯೋಗವನ್ನು ನಡೆಸಿದ್ದು, ಈ ಪ್ರಯೋಗ ಯಶಸ್ವಿಯಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಕಳೆದ ವಾರವಷ್ಟೇ ಭಾರತ ಬ್ರಹ್ಮೋಸ್‌ ಸೂಪರ್‌ ಸಾನಿಕ್ ಕ್ಷಿಪಣಿಗಳ ‘ಲೈವ್ ಆಪರೇಷನಲ್  ಫೈರಿಂಗ್’ ನಡೆಸಿ ಯಶಸ್ವಿಯಾಗಿತ್ತು. ಅಂಡಮಾನ್ ಹಾಗೂ ನಿಕೋಬಾರ್ ದ್ವೀಪ ಸಮೂಹದಲ್ಲೇ ಈ ಪ್ರಯೋಗ ನಡೆದಿತ್ತು. ಇದೀಗ ಇದೇ ದ್ವೀಪ ಸಮೂಹದಲ್ಲೇ ಹಡಗು ನಿರೋಧಕ ಕ್ಷಿಪಣಿಗಳನ್ನು ಉಡಾಯಿಸಿ ನೌಕಾಪಡೆ ಯಶಸ್ವಿಯಾಗಿದೆ.

ಭಾರತ ಹಾಗೂ ರಷ್ಯಾ ಜಂಟಿ ಸಂಶೋಧನೆಯಾದ ಈ ಬ್ರಹ್ಮೋಸ್ ಕ್ಷಿಪಣಿಗಳನ್ನು ಸಬ್‌ಮೆರಿನ್, ಹಡಗು, ವಿಮಾನ ಅಥವಾ ಭೂಮಿಯಿಂದಲೂ ಉಡಾಯಿಸಬಹುದಾಗಿದೆ. ಭಾರತ ಸೇನೆ ಈಗಾಗಲೇ ಬ್ರಹ್ಮೋಸ್ ಕ್ಷಿಪಣಿಗಳನ್ನು ಭಾರತ ಹಾಗೂ ಚೀನಾ ನಡುವ ವಾಸ್ತವ ಗಡಿ ನಿಯಂತ್ರಣ  ರೇಖೆಯಲ್ಲಿ ಅಳವಡಿಸಿದೆ. ಲಡಾಖ್, ಅರುಣಾಚಲ ಪ್ರದೇಶ ಸೇರಿದಂತೆ ಹಲವೆಡೆ ಈ ಕ್ಷಿಪಣಿಗಳನ್ನು ಈಗಾಗಲೇ ನಿಯೋಜಿಸಲಾಗಿದೆ.

ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ-ಅಭಿವೃದ್ಧಿಪಡಿಸಿರುವ ಈ ಬ್ರಹ್ಮೋಸ್ ಕ್ಷಿಪಣಿಯ ಗುರಿಯ ವ್ಯಾಪ್ತಿಯನ್ನು 298 ಕಿ.ಮೀ ನಿಂದ 450 ಕಿ.ಮೀ.ಗೆ ಹೆಚ್ಚಿಸಲಾಗಿದೆ. 

SCROLL FOR NEXT