ವಿದೇಶ

ಇಂಗ್ಲೆಂಡ್‌ನಲ್ಲಿನ ರೂಪಾಂತರಿ ಕೊರೋನಾ ವೈರಸ್ ಮಾರಕವಲ್ಲ: ಭಾರತ ಮೂಲದ ಅಮೆರಿಕಾ ವೈದ್ಯ ಸ್ಪಷ್ಟನೆ

Vishwanath S

ವಾಷಿಂಗ್ಟನ್: ಇಂಗ್ಲೆಂಡ್ ನಲ್ಲಿ ರೂಪಾಂತರಗೊಂಡಿರುವ ಕೊರೋನಾ ವೈರಸ್ ಇದೀಗ ಜಗತ್ತನ್ನೇ ಮತ್ತೆ ಆತಂಕಕ್ಕೀಡು ಮಾಡಿದೆ. ಇದರ ಬೆನ್ನಲ್ಲೇ ಭಾರತ ಮೂಲದ ಅಮೆರಿಕ ವೈದ್ಯ ವಿವೇಕ್ ಮೂರ್ತಿ ಈ ವೈರಸ್ ಮಾರಕವಲ್ಲ ಎಂದು ಹೇಳುವ ಮೂಲಕ ಆತಂಕವನ್ನು ದೂರ ಮಾಡಿದ್ದಾರೆ.

ಬ್ರಿಟನ್ ನಲ್ಲಿ ಪತ್ತೆಯಾಗಿರುವ ಹೊಸ ಸ್ವರೂಪದ ಕೊರೋನಾ ವೈರಸ್ ಹಳೆಯ ವೈರಸ್ ಗಿಂತ ಹೆಚ್ಚು ಪ್ರಬಲ ವೈರಸ್ ಎಂದು ಹೇಳಲಾಗುತ್ತಿದ್ದು, ಹಳೆಯ ವೈರಸ್ ಗೆ ಹೋಲಿಕೆ ಮಾಡಿದರೆ ಇದರ ಸೋಂಕು ಹರಡುವಿಕೆ ವೇಗ ಶೇ.70ರಷ್ಟು ಹೆಚ್ಚು ಎಂದು ಹೇಳಲಾಗುತ್ತಿದೆ. ಆದರೆ ಇದು ಮಾರಕವಲ್ಲ ಎಂದು ಡಾ. ವಿವೇಕ್ ಮೂರ್ತಿ ಹೇಳಿದ್ದಾರೆ. ಕೊರೋನಾಗೆ ಈಗಾಗಲೇ ಲಸಿಕೆ ಕಂಡು ಹಿಡಿಯಲಾಗಿದೆ. ಇದು ರೂಪಾಂತರಗೊಂಡಿರುವ ಕೊರೋನಾ ವೈರಸ್ ಮೇಲೆ ಲಸಿಕೆ ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ ಎಂದು ವರದಿಯಾಗಿತ್ತು. 

ಈ ಬಗ್ಗೆ ಮಾತನಾಡಿರುವ ವಿವೇಕ್ ಮೂರ್ತಿ ಅವರು ಅಭಿವೃದ್ಧಿಪಡಿಸಿರುವ ಲಸಿಕೆಗಳು ರೂಪ ಬದಲಿಸಿರುವ ಕೊರೋನಾ ಮೇಲೆ ಪರಿಣಾಮಕಾರಿಯಾಗದು ಎಂದು ಹೇಳುವುದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಈ ಸುದ್ದಿಗಳನ್ನು ನಂಬಬೇಡಿ ಎಂದು ಹೇಳಿದ್ದಾರೆ.

ಕೊರೋನಾ ಮಾರ್ಗಸೂಚಿಯಂತೆ ಸರಿಯಾಗಿ ಕೈ ತೊಳೆದುಕೊಂಡು, ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸುವುದರಿಂದ ಕೊರೋನಾದಿಂದ ದೂರ ಉಳಿಯಬಹುದು ಎಂದು ಹೇಳಿದ್ದಾರೆ.

ವೈರಸ್ ಸ್ವರೂಪ ಹೇಗೆ ಬದಲಾಗುತ್ತದೆ?
ಸಾಮಾನ್ಯವಾಗಿ ಸೋಂಕಿತ ವ್ಯಕ್ತಿಯ ದೇಹ ವೈರಸ್ ವಿರುದ್ಧ ಹೋರಾಡಲು ವಿಫಲವಾದಾಗ ಅಥವಾ ಸೋಂಕಿತನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕ್ಷೀಣಿಸಿದಾಗ, ವೈರಸ್ ಆ ದೇಹವನ್ನೇ ತನ್ನ ಸಂತಾನೋತ್ಪತ್ತಿ ಜಾಗವಾಗಿಸಿಕೊಳ್ಳುತ್ತದೆ. ಹೀಗೆ ಹಳೆಯ ವೈರಸ್ ನಿಂದ ಉತ್ಪತ್ತಿಯಾದ   ಹೊಸ ವೈರಸ್ ನಲ್ಲಿ ಸಾಕಷ್ಟು ಬದಲಾವಣೆಗಳೂ ಕೂಡ ಇರುತ್ತವೆ, ಕೆಲವೊಮ್ಮೆ ಈ ಬದಲಾವಣೆಗಳೂ ಸಕಾರಾತ್ಮಕ ಅಥವಾ ನಕಾರಾತ್ಮಕವಾಗಿಯೂ ಇರಬಹುದು. ಅಂದರೆ ಹೊಸ ಸ್ವರೂಪದ ವೈರಸ್ ಹಳೆಯ ವೈರಸ್ ಗಿಂತ ಪ್ರಬಲ ಮತ್ತು ಮಾರಣಾಂತಿಕವಾಗೂ ಆಗಿರಬಹುದು  ಅಥವಾ ದುರ್ಬಲವೂ ಆಗಿರಬಹುದು. ಇದನ್ನು ಸಂಶೋಧನೆಗಳ ಮೂಲಕವೇ ತಿಳಿದುಕೊಳ್ಳಬೇಕು ಎಂದು ವಿಜ್ಞಾನಿಗಳು ಹೇಳಿದ್ದಾರೆ.

SCROLL FOR NEXT